ಬೆಂಗಳೂರು: ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಜೊತೆ ಜೊತೆಗೆ ಸಂಚಾರ ನಿಯಮಗಳ ಉಲ್ಲಂಘನೆಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಇದಕ್ಕೆ ಇತಿಶ್ರೀ ಹಾಕಲು ಇತ್ತೀಚೆಗಷ್ಟೇ ಕೇಂದ್ರ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ನಗರದಲ್ಲಿ ಉಲ್ಲಂಘನೆ ಪ್ರಕರಣಗಳು ಇಳಿಮುಖವಾಗಿದ್ದವು. ಇದೀಗ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಗಮವಾಗಿಸಲು ಚಿಂತನೆ ನಡೆಸಿರುವ ನಗರ ಸಂಚಾರ ಪೊಲೀಸರು ನಗರದ ಎಲ್ಲಾ ಸಿಗ್ನಲ್ಗಳಲ್ಲಿ ಅತ್ಯಾಧುನಿಕ ಅಡಾಪ್ಟರ್ ಸಿಗ್ನಲ್ಗಳನ್ನು ಅಳವಡಿಸಲು ಮುಂದಾಗಿದ್ದಾರೆ.
ಹೌದು, ಈ ಅಡಾಪ್ಟರ್ ಸಿಗ್ನಲ್ಗಳನ್ನು ಈಗಾಗಲೇ ನಗರದಲ್ಲಿ ವಿವಿಧ ಭಾಗಗಳಲ್ಲಿ 35 ಕಡೆ ಅಳವಡಿಸಲಾಗಿದ್ದು, ಇನ್ನಷ್ಟು ಅತ್ಯಾಧುನಿಕ ಸಿಗ್ನಲ್ಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಸುಮಾರು 100 ಕೋಟಿ ರೂ.ಅನುದಾನ ಮಂಜೂರು ಮಾಡಿದೆ. ಮೊದಲ ಹಂತವಾಗಿ 200 ಅಡಾಪ್ಟರ್ ಸಿಗ್ನಲ್ಗಳು ಹಾಕಲು ಸಿದ್ಧತೆ ನಡೆಸಲಾಗುತ್ತಿದೆ. ಇನ್ನೂ ಆರು ತಿಂಗಳೊಳಗೆ ನಗರದಲ್ಲಿ ಜನಸಾಂದ್ರತೆ ಹೆಚ್ಚಿರುವ ಎಲ್ಲಾ ಜಂಕ್ಷನ್ಗಳಲ್ಲಿ ಸಿಗ್ನಲ್ ಗಳನ್ನು ಹಾಕಲಿದ್ದೇವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಸುಮಾರು 1.40 ಕೋಟಿ ಜನರು ಇರುವ ರಾಜಧಾನಿಯಲ್ಲಿ ಈವರೆಗೂ ಅಂದಾಜು 75 ಲಕ್ಷಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗಿವೆ. ದಿನೇ ದಿನೇ ನೋಂದಣಿಯಾಗುವ ವಾಹನಗಳ ಸಂಖ್ಯೆ ಏರುಮುಖದತ್ತ ಸಾಗುತ್ತಿದೆ. ನೋಂದಣಿಯಾಗಿರುವ ಪೈಕಿ ದ್ವಿಚಕ್ರ ವಾಹನಗಳೇ ಸಿಂಹಪಾಲು ಪಡೆದುಕೊಂಡಿದೆ. ಪೀಕ್ ಹವರ್ಗಳಲ್ಲಿ ಪ್ರಮುಖ ಜಂಕ್ಷನ್ಗಳು ಸಂಚಾರ ದಟ್ಟಣೆಯಿಂದ ಕೂಡಿರುತ್ತವೆ. ಅದರಲ್ಲೂ ಹಳೆ ಮದ್ರಾಸ್ ರಸ್ತೆ, ಮೈಸೂರು ರೋಡ್, ಸಿಲ್ಕ್ ಬೋರ್ಡ್ ಜಂಕ್ಷನ್, ಮಾರತ್ ಹಳ್ಳಿ, ಏರ್ಪೋರ್ಟ್ ರೋಡ್, ಬನ್ನೇರುಘಟ್ಟ ರಸ್ತೆ ಸೇರಿದಂತೆ ಪ್ರಮುಖ ಸಿಗ್ನಲ್ಗಳಲ್ಲಿ ವಾಹನ ಸವಾರರ ಸಮಯ ವ್ಯರ್ಥವಾಗುತ್ತಿದ್ದು, ಅವರೆಲ್ಲ ಹೈರಾಣಾಗುತ್ತಿದ್ದಾರೆ. ಜಟಿಲಗೊಂಡಿರುವ ವಾಹನ ಸಂಚಾರವನ್ನು ಸವಾರರಿಗೆ ಇನ್ನಷ್ಟು ಸುಲಭಗೊಳಿಸಲು ಟ್ರಾಫಿಕ್ ಪೊಲೀಸರು ಅಡಾಪ್ಟರ್ ಸಿಗ್ನಲ್ಗಳ ಮೊರೆ ಹೋಗಿದ್ದಾರೆ.