ಬೆಂಗಳೂರು:''ಕೇವಲ ದ್ವೇಷದ ರಾಜಕಾರಣಕ್ಕಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದಾರೆ. ಕಾನೂನು ಪ್ರಕಾರವೇ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಮಾಡಿ ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇವತ್ತಿನ ಸಚಿವ ಸಂಪುಟದ ಎಲ್ಲ ನಿರ್ಧಾರಗಳೂ ಜನ ವಿರೋಧ ನಿರ್ಧಾರಗಳೇ ಆಗಿವೆ'' ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್ ಇವತ್ತು ಅಧಿಕಾರಕ್ಕೆ ಬಂದಿದೆ. ಮತ್ತೆ ಅವರ ಹಳೆಯ ರೂಢಿಯಾದ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಪಠ್ಯ ಪುಸ್ತಕ ಬದಲಾವಣೆ ಮಾಡುತ್ತಿದ್ದಾರೆ. ಇವು ಪುಸ್ತಕನೂ ಓದಿಲ್ಲ. ಹೆಡ್ಗೇವಾರ್ ಪಠ್ಯದಲ್ಲಿ ಏನಿದೆ? ಸಾವರ್ಕರ್ ದೇಶದ್ರೋಹಿಯಾ? ಅವರ ಪಾಠ ಯಾಕೆ ತೆಗೆಯಬೇಕಿತ್ತು? ದ್ವೇಷ ಅಷ್ಟೇ, ಇವತ್ತಿನ ಸಚಿವ ಸಂಪುಟದ ಎಲ್ಲಾ ನಿರ್ಧಾರಗಳು ಜನ ವಿರೋಧಿ ಗ್ಯಾರಂಟಿ ಆಧಾರಿತವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈಗ ತುಷ್ಟೀಕರಣದ ರಾಜಕೀಯ ಮಾಡಲು ಹೊರಿಟಿದ್ದಾರೆ. ಜನರೇ ಇವರಿಗೆ ಪಾಠ ಕಲಿಸುತ್ತಾರೆ'' ಎಂದರು.
ಸಂಪುಟದ ನಿರ್ಧಾರವನ್ನು ಖಂಡಿಸಿದ ಬಿಜೆಪಿ:''ಯಾವುದೋ ಆಸೆ ಆಮಿಷಕ್ಕೆ ಒಳಗಾಗಿ ಧರ್ಮ ಬದಲಿಸಬಾರದು ಎಂದು ಜನರ ಅಪೇಕ್ಷೆಯಂತೆ ಕಾನೂನಾತ್ಮಕವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಮಾಡಿತ್ತು. ಆದರೆ ಸಮಾಜದಲ್ಲಿ ಶಾಂತಿ ನೆಲೆಸೋದು ಕಾಂಗ್ರೆಸ್ಗೆ ಬೇಕಿಲ್ಲ. ಸಮಾಜದಲ್ಲಿ ಅಶಾಂತಿ, ಗಲಭೆ, ಗೊಂದಲ ಇರಬೇಕು ಅಂತ ಕಾಂಗ್ರೆಸ್ ಬಯಸಿದೆ, ನಾವು ಕಾನೂನು ಪ್ರಕಾರವೇ ಮತಾಂತರ ತಡೆ ಮಸೂದೆ ತಂದಿದ್ದೆವು, ಕಾಯ್ದೆಯಲ್ಲಿ ಲೋಪ ಏನೂ ಇರಲಿಲ್ಲ. ಆದರೂ ಈಗ ಮತಾಂತರ ತಡೆ ಕಾಯ್ದೆ ವಾಪಸ್ ತಗೋತಿದಾರೆ ಅಧಿಕಾರ ಅವರ ತಲೆಗೆ ಬಡಿದಿದೆ. ಇಂದಿನ ಸಂಪುಟದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ'' ಎಂದರು.
''ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರದಲ್ಲಿಯೂ ರೈತರಿಗೆ ಏನು ಅನುಕೂಲ ಆಗುತ್ತದೆ ಎಂದು ಚರ್ಚೆ ಮಾಡದೇ ತಿದ್ದುಪಡಿ ಮಾಡುತ್ತಿದಾರೆ. ರೈತರಿಗೆ ಏನು ಅನುಕೂಲ ಅಂತಾ ತಿಳಿದುಕೊಳ್ಳದೇ ಎಪಿಎಂಸಿ ಕಾಯ್ದೆ ಬದಲಾವಣೆಗೆ ಹೊರಟಿದ್ದಾರೆ. ಏನು ಬದಲಾವಣೆ ಅಂತಾ ಹೇಳದೇ ಇರುವುದಕ್ಕೆ ಅದು ಮನೆಯ ಖಾಸಗಿ ಗುಟ್ಟಾ? ಅದ್ಭುತವಾದ ಎಪಿಎಂಸಿ ಕಾಯ್ದೆಗೆ ಮಣ್ಣು ಹಾಕುತ್ತಿದ್ದಾರೆ. ಮೋಸದಲ್ಲಿ ಅಧಿಕಾರಕ್ಕೆ ಬಂದು ದುಡಿದು ಬದುಕುವ ಜನರ ಬಾಯಿಗೆ ಮಣ್ಣು ಹಾಕುವ ಸರ್ಕಾರ ಇದು ಜನಪರ ಕಾಯ್ದೆಯನ್ನು ಹಿಂಪಡೆದು ಅದಕ್ಕೆ ತಿದ್ದುಪಡಿ ತರ್ತಿದ್ದಾರೆ. ಕರ್ನಾಟಕ ಇಡೀ ದೇಶಕ್ಕೆ ಮಾದರಿ. ಬೆಳೆಗಾರನಿಂದ ಬಳಕೆದಾರನವರೆಗೂ ನೇರವಾಗಿ ತಲುಪಿಸೋ ವ್ಯವಸ್ಥೆ ಇತ್ತು. ಇದಕ್ಕೂ ಮಣ್ಣು ಹಾಕ್ತಿದಾರೆ. ರಾಜ್ಯದ ಜನರು, ದುಡಿದು ತಿನ್ನುವವರಿಗೂ ಮಣ್ಣು ಹಾಕೋಕೆ ಹೊರಟಿದ್ದಾರೆ. ಎಲ್ಲಾ ವಿಚಾರದಲ್ಲೂ ದುರಂತ. ಇದೊಂದು ನಾಶದ ಪಕ್ಷ'' ಎಂದು ಟೀಕಿಸಿದರು.