ಕರ್ನಾಟಕ

karnataka

ETV Bharat / state

ಬೆಂಗಳೂರಿನ 28, ಗ್ರಾಮಾಂತರದ 4 ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ, ನಿಷೇಧಾಜ್ಞೆ ಜಾರಿ

ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಮತ ಎಣಿಕೆ ಕಾರ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

all-preparations-made-for-the-counting-in-bangalore-rural-district
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ: ಜಿಲ್ಲಾಧಿಕಾರಿ ಆರ್.ಲತಾ

By

Published : May 12, 2023, 10:50 PM IST

ಬೆಂಗಳೂರು :ವಿಧಾನಸಭೆ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಮತ ಎಣಿಕೆಗೆ ಸಿದ್ಧತೆ ಮಾಡಿಕೊಂಡಿರುವ ಚುನಾವಣಾ ಆಯೋಗ, ನಾಳೆ ನಡೆಯಲಿರುವ ಬೆಂಗಳೂರಿನ 28 ಕ್ಷೇತ್ರಗಳ ಮತ ಎಣಿಕೆಗೆ ತಯಾರಿ ಮಾಡಿಕೊಂಡಿದೆ. ಅದರ ಜೊತೆಗೆ ಗ್ರಾಮಾಂತರದ ನಾಲ್ಕು ಕ್ಷೇತ್ರಗಳ ಮತ ಎಣಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗೆ ಸೇರಿರುವ 32 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಗರ ಸೇರಿದಂತೆ 5 ಸ್ಥಳಗಳಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.

ಒಂದು ಮತ ಎಣಿಕೆ ಕೇಂದ್ರಕ್ಕೆ ಇಬ್ಬರು ಡಿಸಿಪಿಗಳನ್ನು ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಲಾಗಿದೆ. ಮತ ಎಣಿಕೆ ಕೇಂದ್ರಗಳ ಬಳಿ ಭದ್ರತೆಗಾಗಿ ಅಧಿಕಾರಿಗಳು ಸೇರಿದಂತೆ 1500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ ಎಣಿಕೆಯ ಸಿಬ್ಬಂದಿ 3 ವರ್ಗದಲ್ಲಿ ಇರಲಿದ್ದು, ಪ್ರತಿ ಟೇಬಲ್‌ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗುತ್ತದೆ.

ಪ್ರತಿ ಎಣಿಕೆ ಕೊಠಡಿಗೆ ಸಾಮಾನ್ಯವಾಗಿ 10 ರಿಂದ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ 2 ಟೇಬಲ್‌ಗಳನ್ನು ಪೋಸ್ಟಲ್ ಬ್ಯಾಲೆಟ್ ಮತಗಳ ಎಣಿಕೆಗೆ ಮೀಸಲಿಡಲಾಗಿರುತ್ತದೆ. ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳ ಪೈಕಿ 4 ವಿವಿಧ ಸ್ಥಳಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಪೈಕಿ ನಾಲ್ಕೂ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲಾ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೂರು ಹಂತದದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗುತ್ತದೆ. ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ನಿಷೇಧಾಜ್ಞೆ : ಮತ ಎಣಿಕೆ ಕಾರ್ಯ ನಿಮಿತ್ತ ನಾಳೆ ಬೆಳಗ್ಗೆ 6 ಗಂಟೆಯಿಂದ ಮೇ 14 ಬೆಳಗ್ಗೆ 6 ಗಂಟೆಯ ವರೆಗೆ ನಗರದಲ್ಲಿ ಯಾವುದೇ ಆಹಿತಕರ ಘಟನೆಗಳು ನಡೆಯದಂತೆ ಹಾಗೂ ಸಾರ್ವಜನಿಕ ಆಸ್ತಿ ಸಂರಕ್ಷಿಸುವ ನಿಟ್ಟಿನಲ್ಲಿ ದಂಡ ಸಂಹಿತೆ 1973 ಕಲಂ 144 ನಿಷೇಧಾಜ್ಞೆ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ (ಪೊಲೀಸ್ ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಹಾಗೂ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಸೇರಿ 5 ಜನರಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಿಲ್ಲ. ಯಾವುದೇ ಮಾರಕಾಸ್ತ್ರ ಬಳಸುವಂತಿಲ್ಲ. ನಗರ ಪ್ರದೇಶದಲ್ಲಿ ಬರುವಂತ ಝೆರಾಕ್ಸ್ ಅಂಗಡಿ, ಸೈಬರ್ ಕೆಫೆ, ಬುಕ್ ಸ್ಟಾಲ್ ಬಾಗಿಲು ತೆರೆಯುವುದನ್ನು ನಿರ್ಬಂಧಿಸಲಾಗಿದೆ. ಕಲ್ಲು, ಸ್ಪೋಟಕ ವಸ್ತುಗಳು ಯಾವುದೇ ಹಾನಿಕಾರಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಕೋವಿಡ್ -19 ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲೂ ಸಕಲ ಸಿದ್ಧತೆ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್​ನಲ್ಲಿ ನಡೆಯಲಿದೆ. ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ 14 ಟೇಬಲ್ ನಿಗದಿಪಡಿಸಲಾಗಿದ್ದು, ಪ್ರತಿ ಟೇಬಲ್​ಗೆ ಒಬ್ಬ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್‌ ನೇಮಕ ಮಾಡಲಾಗಿದೆ. ಅಂಚೆ ಮತ ಎಣಿಕೆ ಕಾರ್ಯಕ್ಕಾಗಿ 1 ಪ್ರತ್ಯೇಕ ಟೇಬಲ್ ನಿಗದಿಪಡಿಸಲಾಗಿದ್ದು, ಸದರಿ ಟೇಬಲ್​ಗೆ ಒಬ್ಬ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್‌ ಇರಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.

ಯಾವ ಕ್ಷೇತ್ರಗಳ ಮತ ಎಣಿಕೆ ಎಲ್ಲೆಲ್ಲಿ:

ಬೆಂಗಳೂರು ಕೇಂದ್ರ: ಬಿಎಂಎಸ್ ಕಾಲೇಜು, ಬೂಗಲ್ ರಾಕ್ ರಸ್ತೆ, ಗಾಂಧಿ ಬಜಾರ್, ಬಸವನಗುಡಿ ಇಲ್ಲಿ ರಾಜರಾಜೇಶ್ವರಿ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ಬೆಂಗಳೂರು ದಕ್ಷಿಣ: ಎಸ್.ಎಸ್.ಎಂ.ಆರ್.ವಿ ಪಿಯು ಕಾಲೇಜು, 26ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ, ಇಲ್ಲಿ ಗೋವಿಂದರಾಜನಗರ, ವಿಜಯನಗರ, ಪದ್ಮನಾಭನಗರ,, ಬಸವನಗುಡಿ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ.

ಬೆಂಗಳೂರು ಉತ್ತರ: ಮೌಂಟ್ ಕಾರ್ಮಲ್ ಕಾಲೇಜು, ಪ್ಯಾಲೆಸ್ ರಸ್ತೆ, ವಸಂತನಗರ, ಇಲ್ಲಿ ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ.ರಾಮನ್‌ ನಗರ.

ಬೆಂಗಳೂರು ನಗರ: ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್, ವಿಠಲ್ ಮಲ್ಯ ರಸ್ತೆ, ಬೆಂಗಳೂರು. ಇಲ್ಲಿ ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಮಹದೇವಪುರ, ಆನೇಕಲ್.

ದೇವನಹಳ್ಳಿ: ಆಕಾಶ್ ಇಂಟರ್ ನ್ಯಾಶನಲ್ ಸ್ಕೂಲ್, ಹೊಸಕೋಟೆ, ನೆಲಮಂಗಲ ಹಾಗೂ ದೊಡ್ಡಬಳ್ಳಾಪುರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ:ಮೈಸೂರಿನಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ : ಡಿಸಿ ಡಾ ಕೆ ವಿ ರಾಜೇಂದ್ರ

ABOUT THE AUTHOR

...view details