ಕರ್ನಾಟಕ

karnataka

ETV Bharat / state

ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸರ್ವಪಕ್ಷ ಶಾಸಕರ ಸಭೆ: ಅಸಮಾಧಾನಿತ ಎಂ.ಕೃಷ್ಣಪ್ಪ, ಪ್ರಿಯಾ ಕೃಷ್ಣ ಗೈರು - ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು ಶಾಸಕರ ಸರ್ವಪಕ್ಷ ಸಭೆಯಿಂದ ಐವರು ಬಿಜೆಪಿ ಶಾಸಕರು ಹೊರನಡೆದರು. ಕಾಂಗ್ರೆಸ್ ಶಾಸಕರಾದ ಎಂ.ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾ ಕೃಷ್ಣ ಕೂಡ ಗೈರಾಗಿದ್ದರು.

All party meeting led by DCM
ಡಿಸಿಎಂ ನೇತೃತ್ವದಲ್ಲಿ ಸರ್ವಪಕ್ಷ ಸಭೆಗೆ ಅಸಮಾಧಾನಿತ ಕೈ ಶಾಸಕ ಎಂ.ಕೃಷ್ಣಪ್ಪ, ಪುತ್ರ ಪ್ರಿಯಾ ಕೃಷ್ಣ ಗೈರು..

By

Published : Jun 5, 2023, 4:17 PM IST

ಬೆಂಗಳೂರು:ಬೆಂಗಳೂರು ಸರ್ವಪಕ್ಷ ಶಾಸಕರ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾ ಕೃಷ್ಣ ಗೈರು ಹಾಜರಾಗಿದ್ದಾರೆ. ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅವರು ಸಭೆಗೆ ಬಂದಿಲ್ಲ ಎಂದು ಹೇಳಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶಾಸಕರ ಸಭೆ ನಡೆಯಿತು.

ವಿಜಯನಗರ ಶಾಸಕರಾದ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜ‌ನಗರ ಶಾಸಕ ಪ್ರಿಯಾ ಕೃಷ್ಣ ಗೈರಾಗಿದ್ದು ಅಚ್ಚರಿ ಮೂಡಿಸಿತು.‌ ಇತ್ತ ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಕೂಡ ಸಭೆಗೆ ಬರಲಿಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮದ ಕಾರಣ ನೀಡಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರು ಸಮಗ್ರ ಅಭಿವೃದ್ಧಿ ಸಂಬಂಧ ಸಮಾಲೋಚನೆ ನಡೆಸಲು ಡಿ.ಕೆ‌.ಶಿವಕುಮಾರ್ ನೇತೃತ್ವದಲ್ಲಿ ಕರೆದ ಸಭೆಯಲ್ಲಿ ಬೆಂಗಳೂರು ನಗರದ ಎಲ್ಲ ಶಾಸಕರು, ಸಂಸದರು, ಎಂಎಲ್ಸಿಗಳು ಭಾಗಿಯಾಗಿದ್ದರು. ಸಚಿವ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್, ಸಂಸದರಾದ ಡಿ.ಕೆ.ಸುರೇಶ್, ತೇಜಸ್ವಿ ಸೂರ್ಯ, ಪಿ.ಸಿ‌.ಮೋಹನ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕ ರಿಜ್ವಾನ್ ಅರ್ಷದ್, ಎ.ಸಿ. ಶ್ರೀನಿವಾಸ್, ಎ.ಕೃಷ್ಣಪ್ಪ, ರವಿ ಸುಬ್ರಮಣ್ಯ, ಟಿ.ಎ.ಶರವಣ, ಗೋಪಾಲಯ್ಯ, ಉದಯ್ ಗರುಡಾಚಾರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಜೀರ್ ಅಹ್ಮದ್ ಮತ್ತಿತರರು ಇದ್ದರು.

ಸಭೆಯಿಂದ ಹೊರನಡೆದ ಐವರು ಬಿಜೆಪಿ ಶಾಸಕರು:ಇದೇ ವೇಳೆ,ಐವರು ಬಿಜೆಪಿ ಶಾಸಕರು ಸಭೆಯಿಂದ ಹೊರನಡೆದರು. ಮಾಜಿ ಸಚಿವರಾದ ಡಾ.ಅಶ್ವಥ್ ನಾರಾಯಣ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಎಸ್.ಆರ್.ವಿಶ್ವನಾಥ್ ಸಭೆ ವಿಳಂಬವಾಗಿ ಆರಂಭವಾದ ಹಿನ್ನೆಲೆಯಲ್ಲಿ ಸಭಾತ್ಯಾಗ ನಡೆಸಿದರು.

ಮನವೊಲಿಕೆಗೆ ಮುಂದಾದ ಸಚಿವ ಜಮೀರ್:ಇನ್ನೂ ಕೆಲವು ಬಿಜೆಪಿ ಶಾಸಕರು ಸಭಾತ್ಯಾಗ ಮಾಡುತ್ತಿದ್ದಂತೆ ಸಚಿವ ಜಕೀರ್ ಅಹಮ್ಮದ್ ಹೊರಗಡೆ ಬಂದು ಅವರ ಮನವೊಲಿಕೆಗೆ ಮುಂದಾದರು. ಆದರೆ, ಸಮಾಧಾನವಾಗದ ಬಿಜೆಪಿ ಶಾಸಕರು ಹೊರ ಹೋದರು. ಇದೇ ಸಮಯದಲ್ಲಿ ಡಿ.ಕೆ.ಶಿವಕುಮಾರ್​ ಸಭೆಗೆ ಆಗಮಿಸಿದರು. ಈ ಎಲ್ಲ ಬೆಳವಣಿಗಳು ನಡೆದ ಬಳಿಕ ಮಾತನಾಡಿದ ಮಾಜಿ ಸಚಿವ ಅಶ್ವತ್ಥ ನಾರಾಯಣ, ಬೆಂಗಳೂರಲ್ಲಿ ಮಳೆ ಮತ್ತು ಪ್ರವಾಹ ನಿರ್ವಹಣೆ ಕುರಿತು ಸಭೆ ಆಯೋಜಿಸಲಾಗಿತ್ತು. ಉಪಮುಖ್ಯಮಂತ್ರಿಗಳು ನಮ್ಮನ್ನು ಸಭೆಗೆ ಕರೆದು ಒಂದು ಗಂಟೆಯವರೆಗೆ ಕಾಯಿಸಿದ್ದಾರೆ. ಸಭೆಗೆ ತಡವಾಗಿ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ತಡವಾಗಿ ಆಗಮಿಸುವ ಕುರಿತು ಮಾಹಿತಿ ನೀಡಿರಲಿಲ್ಲ. ನಿನ್ನೆಯೇ ಸಂಜೆ ವಾಟ್ಸ್​ಆ್ಯಪ್​ ಮೂಲಕ ಸಭೆಗೆ ಆಹ್ವಾನ ನೀಡಿದ್ದರು. ಉದ್ದೇಶಪೂರ್ವಕವಾಗಿ ಈ ರೀತಿಯ ನಡವಳಿಕೆ ಪ್ರದರ್ಶಿಸಿದ್ದಾರೆ. ಇದರಿಂದಾಗಿ ನಿರ್ಗಮಿಸುತ್ತಿದ್ದೇವೆ ಎಂದರು.

ಮಾಜಿ ಸಚಿವ ಭೈರತಿ ಬಸವರಾಜು ಮಾತನಾಡಿ, ಸುಮಾರು ‌ಒಂದು ಗಂಟೆಯಾದರೂ ಸಭೆ ಶುರುವಾಗಲಿಲ್ಲ. ಬೆಂಗಳೂರು ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚಿಸಲು ಬಂದಿದ್ದೆವು. ಆದರೆ, ಸಭೆ ನಡೆಯುವುದೇ ತಡವಾಗಿದೆ ಎಂದು ಹೇಳಿದರು.

ಬಿಜೆಪಿಯ ಸಂಸದರು, ಶಾಸಕರು ಭಾಗಿ:ಐವರು ಬಿಜೆಪಿ ಶಾಸಕರು ಸಭೆ ವಿಳಂಬವಾದ ಹಿನ್ನೆಲೆಯಲ್ಲಿ ಸಭಾತ್ಯಾಗ ಮಾಡಿದರೆ, ಇತರ ಬೆಂಗಳೂರಿನ ಬಿಜೆಪಿ ಶಾಸಕರು, ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಹಾಗೂ ಬಿಜೆಪಿ ಶಾಸಕರಾದ ರವಿ ಸುಬ್ರಮಣ್ಯ, ಮಂಜುಳಾ, ಉದಯ್ ಗರುಡಾಚಾರ್, ಎಂ. ಕೃಷ್ಟಪ್ಪ, ಮಾಜಿ ಸಚಿವ ಗೋಪಾಲಯ್ಯ, ಸಿ.ಕೆ.ರಾಮಮೂರ್ತಿ ಸಭೆಯಲ್ಲಿದ್ದರು.

ಇದನ್ನೂ ಓದಿ:ಸರ್ವಪಕ್ಷ ಸಭೆಗೆ ತಡವಾಗಿ ಆಗಮಿಸಿದ ಡಿಸಿಎಂ: ಕೆಲ ಬೆಂಗಳೂರು ಬಿಜೆಪಿ ಶಾಸಕರಿಂದ ಸಭಾತ್ಯಾಗ

ABOUT THE AUTHOR

...view details