ಬೆಂಗಳೂರು: "ನಾವು ಮತ್ತು ತಮಿಳುನಾಡಿನವರು ಅಣ್ಣ-ತಮ್ಮಂದಿರಂತೆ ಕಾವೇರಿ ವಿಚಾರ ಬಗೆಹರಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹಿಂದೆ ಹೇಳಿದ್ದರು. ಅವರ ಮಾತಿನಂತೇ ನಾನು ನಡೆಯುತ್ತಿದ್ದೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿಂದು ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನೀರಿನ ವಿಚಾರವಾಗಿ ದಿನಾ ಜಗಳ ಮಾಡುವುದಕ್ಕಿಂತ, ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂಬುದು ನನ್ನ ಆಶಯ. ತಮಿಳುನಾಡು ಮತ್ತು ಕರ್ನಾಟಕದ ಜನ ಪರಸ್ಪರ ಎರಡೂ ಕಡೆ ಜೀವನ ಮಾಡುತ್ತಿದ್ದಾರೆ. ಹೀಗಿದ್ದಾಗ ಜಗಳ ಮಾಡುವುದು ಸರಿಯೇ? ಈ ಹಿಂದೆ ಜೂನ್ 2021ರಲ್ಲಿ ಕುಮಾರಸ್ವಾಮಿ ಟ್ವೀಟ್ ಮೂಲಕ ಇದನ್ನೇ ಹೇಳಿದ್ದರು. ನಮ್ಮ ಕರ್ನಾಟಕ ರಾಜ್ಯಕ್ಕೆ ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪೀಠ ರಚನೆ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾವು ನಮ್ಮ ರಾಜ್ಯದ ಪರಿಸ್ಥಿತಿ ವಾಸ್ತವಾಂಶವನ್ನು ನ್ಯಾಯಾಲಯದ ಮುಂದೆ ಇಡುತ್ತೇವೆ" ಎಂದರು.
124 ಟಿಎಂಸಿ ನೀರು ಅಗತ್ಯ: ಆ.31ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದಾರೆ. ನಮಗೆ ಒಟ್ಟು 124 ಟಿಎಂಸಿ ನೀರು ಅಗತ್ಯವಿದೆ. ಆದರೆ ಈಗ ಇರುವುದು ಕೇವಲ 55 ಟಿಎಂಸಿ ಮಾತ್ರ. ಬೆಂಗಳೂರಿಗೆ ಕುಡಿಯಲು 24 ಟಿಎಂಸಿ ನೀರು ಬೇಕು. ಮೈಸೂರು, ಮಂಡ್ಯ, ರಾಮನಗರಕ್ಕೆ 20 ಟಿಎಂಸಿ ಬೇಕು. ಕೆಆರ್ಎಸ್ನಲ್ಲಿ 22 ಟಿಎಂಸಿ, ಕಬಿನಿಯಲ್ಲಿ 6.5 ಟಿಎಂಸಿ, ಹಾರಂಗಿಯಲ್ಲಿ 7 ಟಿಎಂಸಿ ಹಾಗೂ ಹೇಮಾವತಿಯಲ್ಲಿ 20 ಟಿಎಂಸಿ ನೀರಿದೆ.
ಬುಧವಾರ ಸರ್ವಪಕ್ಷ ಸಭೆ: ಆ.23ರ ಬುಧವಾರ ಕಾವೇರಿ, ಮೇಕೆದಾಟು ಮತ್ತು ಮಹಾದಾಯಿ ವಿಚಾರವಾಗಿ ಸರ್ವಪಕ್ಷ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕರೆಯಲಾಗಿದೆ. ಮಾಜಿ ಮುಖ್ಯಮಂತ್ರಿಗಳು, ಸಂಸದರನ್ನು ನಾವು ಸಭೆಗೆ ಕರೆದಿದ್ದೇವೆ. ಸಭೆಯಲ್ಲಿ ಸರ್ವಪಕ್ಷ ನಿಯೋಗ ಹೋಗಿ ಕೇಂದ್ರಕ್ಕೆ ಒತ್ತಡ ಹಾಕಲು ಒಪ್ಪಿದರೆ ನಾವು ಅದಕ್ಕೆ ಸಿದ್ಧ. ನಮಗೆ ರಾಜ್ಯ ರೈತರ ಹಿತ ಮುಖ್ಯ. ನಮ್ಮ ರಾಜ್ಯದ ಗೌರವ ಉಳಿಯಬೇಕು. ಇದು ಎಲ್ಲಾ ಪಕ್ಷಗಳ ಜವಾಬ್ದಾರಿ. ಮೇಕೆದಾಟು ಯೋಜನೆಯಲ್ಲಿ ಹುಲಿ ಸಂರಕ್ಷಣೆ ಪ್ರದೇಶ ಸೇರಿದಂತೆ ಅನೇಕ ಅಡಚಣೆ ಬಂದಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ವಪಕ್ಷ ಸಭೆ ಕರೆದಿದ್ದೇವೆ.