ಬೆಂಗಳೂರು: ಬಿಜೆಪಿ ಹೈಕಮಾಂಡ್ ಹಾಗು ರಾಜ್ಯಪಾಲರಿಗೆ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಪತ್ರ ಬರೆಯುತ್ತಿದ್ದಂತೆ ಆಪ್ತ ಸಚಿವರು ಮತ್ತು ಶಾಸಕರು ಸಿಎಂ ಬೆಂಬಲಕ್ಕೆ ನಿಂತಿದ್ದಾರೆ. ಆಪ್ತರ ಬೆಂಬಲಕ್ಕೆ ಯಡಿಯೂರಪ್ಪ ಫುಲ್ ಖುಷಿಯಾಗಿದ್ದು, ಸಚಿವರೊಂದಿಗೆ ಭೋಜನ ಸೇವಿಸಿದ್ದಾರೆ.
ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ ವಿಷಯ ಬಹಿರಂಗವಾಗುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಶಾಸಕರ ನಿಯೋಗ ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿತು. ಸಿಎಂ ಬಿಡುಗಡೆ ಮಾಡಿದ್ದ ಅನುದಾನಕ್ಕೆ ತಡೆ ನೀಡಿದ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಈ ವೇಳ ಗರಂ ಆದ ಸಿಎಂ, ಅನುದಾನ ಹಂಚಿಕೆ ಮಾಡಿದ್ದಕ್ಕೆ ರಾಜ್ಯಪಾಲರಿಗೆ, ಹೈಕಮಾಂಡ್‌ಗೆ ದೂರು ನೀಡಿದ್ದಾರೆ, ಏನಾಗಲಿದೆಯೋ ಆಗಲಿ. ಈಶ್ವರಪ್ಪ ಅವರ ಖಾತೆಯನ್ನೇ ಬದಲಿಸಿಬಿಡುತ್ತೇನೆ ಎಂದು ಆಪ್ತರ ಮುಂದೆ ಗುಡುಗಿದ್ದಾರೆ ಎನ್ನಲಾಗಿದೆ. ನಂತರ ಆಪ್ತ ಶಾಸಕರೆಲ್ಲಾ ಸೇರಿಕೊಂಡು ಸಿಎಂ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎನ್ನುವ ಅಭಯ ನೀಡಿದ್ದಾರೆ.
ಈಶ್ವರಪ್ಪ ನಡೆ ಪ್ರಶ್ನಿಸಿ ಶಾಸಕರ ತಂಡ ಹೈಕಮಾಂಡ್ ಭೇಟಿ ಮಾಡಲು ಮುಂದಾಗಿದೆ. ಇನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ಬಿಡುಗಡೆ ಆಗದ ಕಾರಣ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ, ಕೂಡಲೇ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸಹಿ ಮಾಡಿದ್ದ ಪತ್ರವನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟು ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿದ್ದನ್ನು ಸಮರ್ಥನೆ ಮಾಡಿಕೊಳ್ಳುವ ಅಭಯ ನೀಡಿ ಸಿಎಂಗೆ ನೈತಿಕ ಸ್ಥೈರ್ಯ ತುಂಬಲು ಮುಂದಾಗಿದ್ದಾರೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ಪತ್ರಕ್ಕೆ ಆಕ್ಷೇಪ: ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತ ಸಚಿವರು