ಕರ್ನಾಟಕ

karnataka

ETV Bharat / state

ಗಾಯಗೊಂಡ ಆನೆ ಮರಿ ರಕ್ಷಣೆಗೆ ಎಲ್ಲ ಕ್ರಮ: ರಾಹುಲ್ ಗಾಂಧಿಗೆ ಪತ್ರ ಬರೆದ ಸಿಎಂ - ಸಿಎಂ ಬಸವರಾಜ ಬೊಮ್ಮಾಯಿ‌

ಗಾಯಗೊಂಡಿದ್ದ ಆನೆ ಮರಿ ರಕ್ಷಣೆ ಕುರಿತು ರಾಹುಲ್ ಗಾಂಧಿ ಬರೆದಿದ್ದ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ, ಆನೆ ಮರಿಗೆ ಎಲ್ಲ ರೀತಿಯ ಔಷಧೋಪಚಾರ ನೀಡಿ ನಿಗಾ ಇರಿಸಲು ಸೂಚಿಸಲಾಗಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

Rahul Gandhi and CM Bommai
ರಾಹುಲ್ ಗಾಂಧಿ ಹಾಗೂ ಸಿಎಂ ಬೊಮ್ಮಾಯಿ

By

Published : Oct 7, 2022, 7:14 AM IST

ಬೆಂಗಳೂರು:ಕಾಡು ಪ್ರಾಣಿಗಳ ದಾಳಿಯಿಂದ ಗಾಯಗೊಂಡಿರುವ ಆನೆ ಮರಿ ಇನ್ನೂ ತಾಯಿ ಆನೆಯನ್ನೆ ಸಂಪೂರ್ಣವಾಗಿ ಅವಲಂಬಿಸಿರುವುದರಿಂದ ಅದನ್ನು ಪ್ರತ್ಯೇಕಿಸಿ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ. ಆದರೆ ಆನೆ ಮರಿಗೆ ಎಲ್ಲ ರೀತಿಯ ಔಷಧೋಪಚಾರ ನೀಡಿ ನಿಗಾ ಇರಿಸಲು ಸೂಚಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪತ್ರದ ಮೂಲಕ ತಿಳಿಸಿದ್ದಾರೆ.

ಗಾಯಗೊಂಡಿದ್ದ ಆನೆ ಮರಿ ರಕ್ಷಣೆ ಕುರಿತು ಸಿಎಂಗೆ ರಾಹುಲ್ ಗಾಂಧಿ ಅವರು ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಪತ್ರದ ಮೂಲಕ ಉತ್ತರ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ‌, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಯಗೊಂಡಿರುವ ಆನೆಯ ಮರಿ ಕುರಿತು ಭಾವಚಿತ್ರದ ಜೊತೆಗೆ ಅ.5 ರಂದು ಬರೆದಿದ್ದ ನಿಮ್ಮ ಪತ್ರವನ್ನು ನಾನು ಸ್ವೀಕರಿಸಿದ್ದೇನೆ. ಆನೆ ಮರಿಯ ಸ್ಥಿತಿಯ ಬಗ್ಗೆ ನಿಮ್ಮ ಕಾಳಜಿಯನ್ನು ನಾನು ಪ್ರಶಂಸಿಸುತ್ತೇನೆ. ಈ ಬಗ್ಗೆ ನಮ್ಮ ಅಧಿಕಾರಿಗಳ ಬಳಿ ವಿಚಾರಿಸಿದ್ದೇನೆ.

ರಾಹುಲ್ ಗಾಂಧಿಗೆ ಪತ್ರ ಬರೆದ ಸಿಎಂ

(ಓದಿ: ನಾಗರಹೊಳೆಯಲ್ಲಿ ಗಾಯಗೊಂಡ ಆನೆ ಮರಿ ಕಂಡ ರಾಹುಲ್​: ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ಪತ್ರ)

ಆನೆ ಮರಿಯ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡಿರುವುದು ಗಮನಕ್ಕೆ ಬಂದಿದೆ. ಇದು ಪ್ರಸ್ತುತ ತನ್ನ ತಾಯಿಯ ಸ್ತನ್ಯಪಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಹಾಗಾಗಿ ನಮ್ಮ ಅಧಿಕಾರಿಗಳು ತಾಯಿ ಮತ್ತು ಮರಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಚಿಕಿತ್ಸೆಗಾಗಿ ಈ ಹಂತದಲ್ಲಿ ಆನೆ ಮರಿಯನ್ನ ತನ್ನ ತಾಯಿಯಿಂದ ಬೇರ್ಪಡಿಸಿದರೆ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾಯ ಮಾಡದಿರಬಹುದು ಮತ್ತು ಅದು ಉಲ್ಬಣಗೊಳ್ಳಲು ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಸದ್ಯ ಆನೆ ಮರಿಗೆ ಅಗತ್ಯ ಔಷಧೋಪಚಾರ ನೀಡಿ, ಅದರ ಆರೋಗ್ಯದ ಮೇಲೆ ನಿರಂತರ ನಿಗಾವಹಿಸಿ ಸಕಾಲದಲ್ಲಿ ಔಷಧೋಪಚಾರ ಮಾಡುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಹುಲ್ ಗಾಂಧಿಗೆ ಸಿಎಂ ಬೊಮ್ಮಾಯಿ‌ ಪತ್ರದ ಮೂಲಕ ವಿವರಿಸಿದ್ದಾರೆ.

ಮರಿ ಆನೆಯ ಜೀವ ಉಳಿಸಲು ನಮ್ಮ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ. ಈ ನಿಟ್ಟಿನಲ್ಲಿ ನಿಮ್ಮ ಕಾಳಜಿಯನ್ನು ಮತ್ತೊಮ್ಮೆ ಶ್ಲಾಘಿಸುತ್ತೇನೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಆನೆಗೆ ಚಿಕಿತ್ಸೆ ನೀಡುವಂತೆ ರಾಹುಲ್ ಗಾಂಧಿ ಪತ್ರ: ಸ್ಪಂದಿಸಿದ ಸಿಎಂ ಬೊಮ್ಮಾಯಿ

ABOUT THE AUTHOR

...view details