ಬೆಂಗಳೂರು: ಕಂದಾಯ/ಭೂ ದಾಖಲೆಗಾಗಿ ರೈತರು ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ 'ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಇಂದು ಚಾಲನೆ ದೊರೆಯಲಿದೆ. ಶನಿವಾರ ಒಂದೇ ದಿನ ರಾಜ್ಯಾದ್ಯಂತ 50 ಲಕ್ಷ ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ಕೊಡುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
'ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ' ಕಾರ್ಯಕ್ರಮ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಗೀರ್ಲಹಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿ, ರೈತರ ಮನೆ ಮನೆಗೆ ತೆರಳಿ ದಾಖಲೆ ನೀಡಲಿದ್ದಾರೆ.
ಕಡತ ವಿಲೇವಾರಿಗಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಎಂಬ ವಿನೂತನ ಕಾರ್ಯಕ್ರಮವನ್ನು ಕಂದಾಯ ಇಲಾಖೆ ರೂಪಿಸಿತ್ತು. ಅದೇ ರೀತಿ ಇದೀಗ ಮತ್ತೊಂದು ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇಂದು ಒಂದೇ ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಕಂದಾಯ ದಾಖಲೆಗಳಾದ ಆರ್‌ಟಿಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ರಾಜ್ಯಾದ್ಯಂತ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ರೈತರ ಮನೆಗೆ ತೆರಳಿ ಕಂದಾಯ ದಾಖಲೆ ನೀಡಲಿದ್ದಾರೆ. ಸುಮಾರು 50 ಲಕ್ಷಕ್ಕೂ ಅಧಿಕ ರೈತರಿಗೆ ದಾಖಲೆ ನೀಡಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.
ಕರ್ನಾಟಕದಾದ್ಯಂತ ರೈತರಿಗೆ ಸೇವೆ ಸಲ್ಲಿಸಲು ಮತ್ತು ರೈತರ ಸಬಲೀಕರಣಕ್ಕಾಗಿ ಆರ್‌ಟಿಸಿ, ಜಮೀನಿನ ಅಟ್ಲಾಸ್ ನಕ್ಷೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಮೂಲಕ ರೈತ ಕುಟುಂಬಗಳಿಗೆ ಆಂದೋಲನ ರೀತಿ 5 ಕೋಟಿಗೂ ಹೆಚ್ಚು ದಾಖಲೆಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ;ಚುನಾವಣೆ ಜಯಭೇರಿ ಬಳಿಕ ತಾಯಿ ಆಶೀರ್ವಾದ ಪಡೆದು ಜೊತೆಗೆ ಉಪಹಾರ ಸೇವಿಸಿದ ಮೋದಿ