ಬೆಂಗಳೂರು: ಅಧ್ಯಕ್ಷರ ಅವಧಿಯನ್ನು ಈಗಿನ ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ಬೈಲಾ ತಿದ್ದುಪಡಿಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ. ಬಸವನಗುಡಿಯ ಆಚಾರ್ಯ ಪಾಠ ಶಾಲಾ ಕಾಲೇಜು ಆವರಣದಲ್ಲಿ ಭಾನುವಾರ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ 41 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಬೈಲಾಕ್ಕೆ ಸಂಬಂಧಿಸಿದ ಕೆಲವು ಮಹತ್ವದ ತಿದ್ದುಪಡಿಗಳನ್ನು ಸಭೆ ಅನುಮೋದಿಸಿತು.
ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿ, ಮಹಾಸಭಾದ ಬೈಲಾ ದಶಕಗಳ ಹಿಂದೆ ರಚನೆಗೊಂಡಿದ್ದು ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ತಿದ್ದುಪಡಿಯ ಅವಶ್ಯಕತೆಯಿದೆ. ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ತಜ್ಞರು, ಅನುಭವಿ ವಕೀಲರು, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರನ್ನೊಳಗೊಂಡ ಸಮಿತಿ ಸಮಗ್ರ ಅಧ್ಯಯನ ನಡೆಸಿ ತಿದ್ದುಪಡಿಗೆ ಸಂಬಂಧಿಸಿದಂತೆ ಸೂಚಿಸಿದ ಶಿಫಾರಸುಗಳನ್ನು ಅಳವಡಿಸಿಕೊಂಡು ಬೈಲಾಕ್ಕೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿಯನ್ನು ಕಾರ್ಯಕಾರಿ ಸಮಿತಿ ಮುಂದಿಟ್ಟು ಚರ್ಚೆ ನಡೆಸಿ ಒಪ್ಪಿಗೆ ಪಡೆಯಲಾಗಿದೆ ಎಂದು ವಿವರಿಸಿದರು.
ಸದಸ್ಯತ್ವ ಶುಲ್ಕ ಹೆಚ್ಚಳ:ಸದಸ್ಯತ್ವ ಶುಲ್ಕವನ್ನು ಈಗಿನ 10 ಸಾವಿರ ರೂ. ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಯಿತು. ನಿಗದಿತ ಕೇಂದ್ರಗಳಿಂದ ಮಹಾ ಸಭಾ ಆಧ್ಯಕ್ಷರ ಚುನಾವಣೆಗೆ ಮತ ಚಲಾಯಿಸುವ ಸಂಬಂಧದ ತಿದ್ದುಪಡಿಗೂ ಅನುಮೋದನೆ ನೀಡಲಾಯಿತು.
ಭಾನುವಾರ ನಗರದ ಆಚಾರ್ಯ ಪಾಠಶಾಲೆ ಸಾಂಗಣದಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಶೋಕ ಹಾರನಹಳ್ಳಿ ಭಾರತೀಯ ಮಹಿಳೆಯರು ಸಂಸ್ಕೃತಿಯ ಬುನಾದಿಯಾಗಿದ್ದಾರೆ. ಬ್ರಾಹ್ಮಣ ಕುಟುಂಬಗಳು ಪರಂಪರೆಯಲ್ಲಿ ಸಂಸ್ಕಾರವಂತರಾಗಿ ಉಳಿದಿರುವುದು ಕೇವಲ ಮಹಿಳೆಯರಿಂದ, ನಮ್ಮ ಸಮಾಜದಲ್ಲಿ ಕುಟುಂಬವನ್ನು ಹಿಡಿದಿಡಲು ಇವರ ಪಾತ್ರ ಹಿರಿದಾಗಿದೆ ಎಂದರು.