ಬೆಂಗಳೂರು:ವೀರಶೈವ-ಲಿಂಗಾಯತ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ (OBC) ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಅದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಎಚ್ಚರಿಕೆ ನೀಡಿದೆ.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ರಾಜ್ಯ ಘಟಕದ ಅಧ್ಯಕ್ಷ ಡಾ. ಎನ್ ತಿಪ್ಪಣ್ಣ, ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ನೇತೃತ್ವದ ನಿಯೋಗ ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿತ್ತು. ಈ ವೇಳೆ ವೀರಶೈವ-ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಸಿಎಂ ಬೊಮ್ಮಾಯಿ ಕರ್ನಾಟಕ ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ-ಲಿಂಗಾಯತ ಸಮುದಾಯವನ್ನು ಇತರೆ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ. ಆದರೆ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗದೆ ಇರುವುದರಿಂದ ಕೇಂದ್ರ ಸರ್ಕಾರದಿಂದ ದೊರೆಯಬಹುದಾದ ಸೌಕರ್ಯಗಳಿಂದ ಸಮಾಜ ವಂಚಿತವಾಗಿರುತ್ತದೆ.
ಎಲ್ಲ ರಾಜ್ಯಗಳಲ್ಲಿಯೂ ವೀರಶೈವ-ಲಿಂಗಾಯತರು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಆದರೆ ನಮ್ಮ ಸಮುದಾಯ ಮಾತ್ರ ಸೇರ್ಪಡೆಯಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಮನವಿ ಪತ್ರದಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.
ಸಿಎಂ ನಿವಾಸಕ್ಕೆ ಭೇಟಿ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ ನಿಯೋಗ ನೇಮಕಾತಿ ಅವಕಾಶಗಳಿಂದ ವಂಚಿತ: ವೀರಶೈವ-ಲಿಂಗಾಯತ ಸಮುದಾಯವು ಬಹುತೇಕ ಕೃಷಿ ಮತ್ತು ಕೃಷಿ ಆಧಾರಿತ ಕಸುಬುಗಳನ್ನ ಅವಲಂಬಿಸಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿರುತ್ತದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರದೆ ಇರುವ ಕಾರಣ ನಮ್ಮ ಸಮುದಾಯದ ಜನರು ದಶಕಗಳಿಂದ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿ ಅವಕಾಶಗಳಿಂದ ವಂಚಿತರಾಗಿರುತ್ತಾರೆ.
ಕರ್ನಾಟಕ ರಾಜ್ಯದ 3ನೇ ಹಿಂದುಳಿದ ವರ್ಗಗಳ ಆಯೋಗದ (ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗ) ವರದಿಯ ಕೆಲವು ಅಂಶಗಳಲ್ಲಿ ರಾಜ್ಯ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮತ್ತು ಈಗಾಗಲೇ ಒಬಿಸಿ ಪಟ್ಟಿಯಲ್ಲಿರುವ ಈ ಸಮುದಾಯಗಳಿಗಿಂತಲೂ ವೀರಶೈವ-ಲಿಂಗಾಯತ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವುದು ಸ್ಪಷ್ಟವಾಗಿರುತ್ತದೆ. ಅದಾಗ್ಯೂ ವೀರಶೈವ-ಲಿಂಗಾಯತ ವರ್ಗಕ್ಕೆ ಕೇಂದ್ರ ಒಬಿಸಿ ಪಟ್ಟಿಯಲ್ಲಿ ಮಾನ್ಯತೆ ನೀಡದಿರುವುದು ಸೋಜಿಗದ ಸಂಗತಿಯಾಗಿದೆ ಎಂಬುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಸಿಎಂ ನಿವಾಸಕ್ಕೆ ಭೇಟಿ ನೀಡಿದ ಅಖಿಲ ಭಾರತ ವೀರಶೈವ ಮಹಾಸಭಾ ನಿಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ:ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವೀರಶೈವ-ಲಿಂಗಾಯತ 16 ಉಪಪಂಗಡಗಳು ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿದ್ದು, ಸೌಲಭ್ಯ ಪಡೆಯುತ್ತಿದ್ದಾರೆ. ಜನಸಂಖ್ಯಾ ದೃಷ್ಟಿಯಿಂದ ಇವು ಅತಿ ಸಣ್ಣ ಉಪಪಂಗಡಗಳಾಗಿದ್ದು, ಇನ್ನುಳಿದ ಬಹುತೇಕ ಉಪ ಪಂಗಡಗಳು ಒಬಿಸಿ ಪಟ್ಟಿಯಿಂದ ಹೊರಗುಳಿದಿರುವುದರಿಂದ ಒಟ್ಟು ಸಮಾಜಕ್ಕೆ ಸೌಲಭ್ಯ ದೊರೆತಂತಾಗುವುದಿಲ್ಲ. ಇನ್ನುಳಿದಿರುವ ಉಪಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಸೌಲಭ್ಯ ದೊರೆಯುವಂತೆ ಮಾಡುವುದು ಸೂಕ್ತವಾಗುತ್ತದೆ.
ಇದರಿಂದ ಇಡೀ ಸಮುದಾಯದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಇಲ್ಲವಾದಲ್ಲಿ ಉಳಿದ ಉಪಪಂಗಡದವರು ಈ ಸವಲತ್ತಿನಿಂದ ವಂಚಿತರಾಗಲಿದ್ದಾರೆ. ಆದ್ದರಿಂದ, ವೀರಶೈವ-ಲಿಂಗಾಯತ ಸಮುದಾಯವನ್ನು ಎಲ್ಲ ಉಪಪಂಗಡಗಳನ್ನೂ ಒಳಗೊಂಡಂತೆ ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ (OBC) ಪಟ್ಟಿಯಲ್ಲಿ ಸೇರಿಸುವ ಮೂಲಕ ಸಮುದಾಯಕ್ಕೆ ಸೌಲಭ್ಯ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಇದನ್ನೂ ಓದಿ:ಮೀಸಲಾತಿಗೆ ಯಡಿಯೂರಪ್ಪ ಅಡ್ಡಿ.. ಸಿಎಂ ಬೊಮ್ಮಾಯಿ ಮನೆ ಮುಂದೆ ಸತ್ಯಾಗ್ರಹಕ್ಕೆ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ