ಬೆಂಗಳೂರು: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಕರ್ನಾಟಕಕ್ಕೆ ಬಂದಿದ್ದ, ಇಂಡೋನೇಷ್ಯಾ, ಮಲೇಷಿಯಾ, ಕಿರ್ಗಿಸ್ತಾನ್ನ ಎಲ್ಲಾ ವಿದೇಶಿಯರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಧಾರ್ಮಿಕ ಸಭೆ ನಂತರ ರಾಜ್ಯಕ್ಕೆ 62 ವಿದೇಶಿಯರು ಆಗಮಿಸಿದ್ದು, 12 ಜನ ವಾಪಸ್ ಹೋಗಿದ್ದಾರೆ. ಬಾಕಿ ಉಳಿದಿರುವ 50 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಕರ್ನಾಟಕ ಮೂಲದ 391 ಜನರು ದೆಹಲಿ ಧಾರ್ಮಿಕ ಸಭೆಗೆ ಹೋಗಿದ್ದ, ಮಾಹಿತಿ ಮೊದಲ ಹಂತವಾಗಿ ಸಿಕ್ಕಿದೆ. ಎಲ್ಲಾ 391 ಜನರನ್ನು ಕ್ವಾರಂಟೈನ್ ಮಾಡಲಾಗಿದೆ, ಇವರ ಮೇಲೆ ನಿರಂತರ ಕಟ್ಟೆಚ್ಚರ ವಹಿಸಲಾಗಿದೆ ಎಂದಿದ್ದಾರೆ.
ಬಸವರಾಜ ಬೊಮ್ಮಾಯಿ ಹೊರಡಿಸಿದ ಪತ್ರಿಕಾ ಹೇಳಿಕೆ ಇನ್ನೂ ಹಲವಾರು ಜನ ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿರುವ ಅನುಮಾನ ಇದ್ದು, ಶೋಧನೆ ನಡೆದಿದೆ. ಸಂಖ್ಯೆ ಹೆಚ್ಚಾಗಿರುವ ನಿರೀಕ್ಷೆ ಇದೆ. ಜೊತೆಗೆ ಸಭೆಯಲ್ಲಿ ಭಾಗವಹಿಸಿ ವಾಪಸ್ ಬಂದವರು ತಮ್ಮ ನಿವಾಸದಲ್ಲಿ ಇರದೇ ರಾಜ್ಯ ಮತ್ತು ಜಿಲ್ಲೆಯ ಹೊರಗೆ ವಲಸೆ ಹೋಗಿದ್ದಾರೆ. ಇವರ ಶೋಧ ಕಾರ್ಯವು ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಸಭೆ ನಂತರ ಹಲವಾರು ಜನರು ದೆಹಲಿಯಿಂದ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರ ರಾಜ್ಯಗಳಿಗೆ ತೆರಳಿದ್ದು, ಅವರು ಇನ್ನೂ ಕರ್ನಾಟಕ ತಲುಪಿಲ್ಲ. ಅವರ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೇ ದೆಹಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಹೆಚ್ಚಳವಾಗುವ ಸುಳಿವು ಕೂಡ ನೀಡಿದ್ದಾರೆ.