ಕರ್ನಾಟಕ

karnataka

ETV Bharat / state

ಪದವಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಉನ್ನತ ಶಿಕ್ಷಣ ಸಚಿವರು ಹೇಳಿದ್ದೇನು? - Degree classes resume

ಸೆಪ್ಟೆಂಬರ್​ನಿಂದ ಅನ್​ಲೈನ್ ಮೂಲಕವೇ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಅಕ್ಟೋಬರ್​ನಿಂದ ಎಲ್ಲಾ ಕಾಲೇಜುಗಳನ್ನು ಪುನಾರಂಭಿಸಲಾಗುವುದು, ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದು ಸಚಿವ ಅಶ್ವತ್ಥ್​​ ನಾರಾಯಣ ತಿಳಿಸಿದ್ದಾರೆ.

All Degree  classes resume from October
ಅಕ್ಟೋಬರ್​ನಿಂದ ಎಲ್ಲಾ ಪದವಿ ತರಗತಿಗಳು ಪುನರಾರಂಭ

By

Published : Aug 26, 2020, 3:31 PM IST

ಬೆಂಗಳೂರು: ಸೆಪ್ಟೆಂಬರ್ 1 ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್​ಲೈನ್ ಮೂಲಕ ಪೂರ್ಣ ಪ್ರಮಾಣದಲ್ಲಿ ಪ್ರಾರಂಭ ಮಾಡಲಾಗುತ್ತದೆ. ಅಕ್ಟೋಬರ್​​ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ.

ಸುಬ್ರಹ್ಮಣ್ಯ ನಗರದ ವಾರ್ಡ್ ಸಂಖ್ಯೆ 66 ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ನೇರವಾಗಿ ತರಗತಿಗಳನ್ನು ಆರಂಭಿಸುವುದರ ಬಗ್ಗೆ ಮಾರ್ಗಸೂಚಿಗಳು ಬರಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲ ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ತಿಂಗಳಿಂದ ಅನ್​ಲೈನ್ ಮೂಲಕವೇ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ. ಜೊತೆಗೆ ಅಕ್ಟೋಬರ್​ನಿಂದ ಎಲ್ಲಾ ಕಾಲೇಜುಗಳನ್ನು ಪುನಾರಂಭಿಸಲಾಗುವುದು. ವಿದ್ಯಾರ್ಥಿಗಳು ಕೂಡ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ ಎಂದರು.

ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.

ತರಗತಿ ಆರಂಭದ ಜೊತೆಗೆ ಅಂತಿಮ ವರ್ಷದ ಪರೀಕ್ಷೆ:

ಶೈಕ್ಷಣಿಕ ವರ್ಷದ ಆರಂಭದ ಜೊತೆಯಲ್ಲೇ ಅಂತಿಮ ವರ್ಷದ ಎಲ್ಲಾ ಪದವಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವರು ಹೇಳಿದರು.

ನೀಟ್ ಪರೀಕ್ಷೆಗೆ ಅಡ್ಡಿ ಬೇಡ :

ರಾಜ್ಯದಲ್ಲಿ 1.94 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಿಇಟಿ ಪರೀಕ್ಷೆ ನಡೆದಿದೆ. ಅದರಲ್ಲೂ 63 ಮಂದಿ ಕೋವಿಡ್ ಪಾಸಿಟಿವ್​ ವಿದ್ಯಾರ್ಥಿಗಳು ಕೂಡ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಱಂಕ್​ ಪಡೆದಿದ್ದಾರೆ. ವಾಸ್ತವ ಹೀಗಿರಬೇಕಾದರೆ ಕೆಲವರು ನೀಟ್ ಪರೀಕ್ಷೆ ಬೇಡ ಎಂದು ಯಾಕೆ ಹೇಳುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಯಾರೂ ಕೂಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ಇದರ ಹಿಂದೆ ಏನೋ ಹುನ್ನಾರ ಇದ್ದಂತಿದೆ. ಮೆರಿಟ್ ಮೂಲಕ ಸೀಟು ಸಿಗಬಾರದು, ವ್ಯವಸ್ಥಿತವಾಗಿ ಸೀಟು ಹಂಚಿಕೆಯಾಗಬಾರದು ಎಂಬ ದುರುದ್ದೇಶ ಇದ್ದಂತೆ ಕಾಣುತ್ತಿದೆ. ಯಾವುದೋ ಕಾಣದ ಕೈಗಳು ಇದರ ಹಿಂದಿವೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ನೀಟ್ ಪರೀಕ್ಷೆಗೆ ಅಡ್ಡಿಪಡಿಸಲು ಯತ್ನಿಸುತ್ತಲೇ ಇವೆ. ಹಲವಾರು ವರ್ಷಗಳಿಂದ ಈ ದುಷ್ಟ ಯತ್ನಗಳನ್ನು ಮಾಡುತ್ತಾ ಬರಲಾಗುತ್ತಿದೆ. ಒಂದು ಪರೀಕ್ಷೆಯ ಮೂಲಕ ದೇಶದ ವಿವಿಧೆಡೆ ಪ್ರವೇಶಾತಿ ಪಡೆಯುವ ಪದ್ಧತಿ ಇದಾಗಿದೆ. ಈ ಪರೀಕ್ಷೆ ಆಗಲೇಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.

ABOUT THE AUTHOR

...view details