ನೆಲಮಂಗಲ: ರಾಜ್ಯದಲ್ಲಿನ ಬಹುತೇಕ ಮುಸ್ಲಿಂಮರು ಸಿದ್ದರಾಮಯ್ಯ ಸಿಎಂ ಆಗಲು ಬಯಸುತ್ತಾರೆ, ಆದರೆ, ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ತಿರ್ಮಾನವೇ ಅಂತಿಮ ಎಂದು ಶಾಸಕ ಜಮೀರ್ ಅಹಮದ್ ದಾಬಸ್ ಪೇಟೆಯಲ್ಲಿ ಹೇಳಿದರು. ನೆಲಮಂಗಲ ತಾಲೂಕಿನ ಮೂಲಕ ಮಧುಗಿರಿಗೆ ಕಾರ್ಯನಿಮಿತ್ತ ಹೋಗುತ್ತಿದ್ದ ವೇಳೆ ದಾಬಸ್ ಪೇಟೆಯಲ್ಲಿ ಕಾರ್ಯಕರ್ತರು ಮತ್ತು ಮುಸ್ಲಿಂ ಬಾಂಧವರು ಬರಮಾಡಿಕೊಂಡು ಸನ್ಮಾನಿಸಿದರು. ಇದೇ ವೇಳೆ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಿ ಪ್ರವಾಸ ಮಾಡಿದರೂ ಎಲ್ಲಾ ಸಮುದಾಯದರು ಸಿದ್ದರಾಮಯ್ಯ ಸಿಎಂ ಆಗಲು ಬಯಸುತ್ತಿದ್ದಾರೆ. ಹಾಗೆಯೇ ಮುಸ್ಲಿಂ ಸಮುದಾಯವರು ಸಹ ಸಿದ್ದರಾಮಯ್ಯ ಸಿಎಂ ಆಗಲು ಬಯಸುತ್ತಿದ್ದಾರೆ. ಆದರೆ, ಹೈಕಮಾಂಡ್ ತಿರ್ಮಾನವೇ ಅಂತಿಮ ಎಂದರು.
ನಾನು ಸಹ ಮೊದಲಿನಿಂದಲೂ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹೇಳುತ್ತಿದ್ದು ಈಗಲು ಸಹ ಈ ಮಾತಿಗೆ ಬದ್ದನಾಗಿದ್ದಾನೆ. ಇದು ನನ್ನ ವೈಯಕ್ತಿಕ ಹೇಳಿಕೆ ಎಂದರು. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಳಒಪ್ಪಂದ ಮಾಡಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 2018ರ ಚುನಾವಣೆಯಲ್ಲೂ ಡಾ.ಯತಿಂದ್ರ ಅವರನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಯತಿಂದ್ರ 50 ಸಾವಿರ ಮತಗಳ ಅಂತರದಲ್ಲಿ ಗೆದ್ದರು, ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ದಾಖಲೆಯ ಅಂತರದಲ್ಲಿ ಜಯ ಸಾಧಿಸುತ್ತಾರೆ, ಈ ಗೆಲುವು ಇತಿಹಾಸವಾಗಲಿದೆ ಎಂದು ಹೇಳಿದರು.
ಹಾಗೆಯೇ ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, 30 ವರ್ಷಗಳ ಹಿಂದೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇಕಡಾ 4ರಷ್ಟು ಮೀಸಲಾತಿ ನೀಡಲಾಗಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ 1994ರಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಇಂದು ಏಕಾಏಕಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿದೆ, ಮೀಸಲಾತಿ ರದ್ದು ಮಾಡಲು ಒಂದು ಕ್ರಮ ಇದೆ. ಸಚಿವ ಸಂಪುಟದಲ್ಲಿ ತೀರ್ಮಾನವಾಗಬೇಕು. ಅಸೆಂಬ್ಲಿಯಲ್ಲಿ ಚರ್ಚೆ ಆಗಬೇಕು ಮತ್ತು ಹಿಂದುಳಿದ ವರ್ಗಗಳ ಅಯೋಗದ ವರದಿಯನ್ನ ಕೇಳಬೇಕು. ನಮಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ, ಕೋರ್ಟ್ನಲ್ಲಿ ಮೀಸಲಾತಿ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಸ್ಟೇ ನೀಡಲಾಗಿದೆ ಎಂದರು.