ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ನಾಳೆಯಿಂದ ಎಲ್ಲಾ ಬಸ್​​​​​ಗಳ ಸಂಚಾರ ಆರಂಭ: ಲಕ್ಷ್ಮಣ ಸವದಿ

ಕಂಟೇನ್ಮೆಂಟ್​​​ ಪ್ರದೇಶ ಬಿಟ್ಟು ಎಲ್ಲಾ ಪ್ರದೇಶಗಳಲ್ಲಿ ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದ್ದು, ಒಂದು ಬಸ್​​​​​​ನಲ್ಲಿ 30 ಜನ ಮಾತ್ರ ಸಂಚರಿಸಬಹುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

All buses to start from tomorrow
ನಾಳೆಯಿಂದ ಎಲ್ಲಾ ಬಸ್​​​​​ಗಳ ಸಂಚಾರ ಆರಂಭ

By

Published : May 18, 2020, 3:15 PM IST

ಬೆಂಗಳೂರು: ನಾಳೆ ಬೆಳಗ್ಗೆಯಿಂದ ನಾಲ್ಕು ನಿಗಮಗಳ ಬಸ್​​​​ಗಳು ಹಾಗೂ ಬಿಎಂಟಿಸಿ ಬಸ್​​​ಗಳ ಓಡಾಟ ಆರಂಭವಾಗಲಿದೆ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಂಟೇನ್ಮೆಂಟ್​ ಪ್ರದೇಶ ಬಿಟ್ಟು ಎಲ್ಲಾ ಪ್ರದೇಶಗಳಲ್ಲಿ ಬಸ್ ಸಂಚಾರ ಮಾಡಲಿದ್ದು, ಪ್ರಯಾಣಿಕರು ಕಡ್ಡಾಯವಾಗಿ ‌ಮಾಸ್ಕ್ ಧರಿಸಿಕೊಳ್ಳಬೇಕು. ಚಾಲಕರ ಕ್ಯಾಬೀನ್​ಅನ್ನು ಸಂಪೂರ್ಣವಾಗಿ ಸೀಲ್‌ ಮಾಡಲಾಗುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದು ಬಸ್​​​​​​ನಲ್ಲಿ 30 ಜನ ಮಾತ್ರ ಸಂಚರಿಸಬಹುದು ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಯಾಣ ದರ ಹೆಚ್ಚಿಸುವುದಿಲ್ಲ. ಈ ಮುಂಚಿನ ದರವೇ ಮುಂದುವರೆಯಲಿದೆ. ನಾಳೆಯಿಂದ ಎಸಿ ಹೊರತುಪಡಿಸಿ ಎಲ್ಲಾ ಬಸ್​​​​​​​​​​​​​​​​ಗಳು ಸಂಚರಿಸಲಿವೆ ಎಂದರು. ಇತ್ತ ಆಟೋ ರಿಕ್ಷಾ, ಓಲಾ ಹಾಗೂ ಉಬರ್ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಖಾಸಗಿ ಬಸ್​​​​​ಗಳು ಸಹ ಓಡಾಟ ನಡೆಸಬಹುದಾಗಿದೆ. ಆದರೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಮೂರು ರಾಜ್ಯಗಳಿಗೆ ಸಂಚಾರ ಸಂಪೂರ್ಣ ಬಂದ್​​?

ಅಂತಾರಾಜ್ಯ ಬಸ್​​​​ಗಳ ಓಡಾಟವನ್ನು ಮೇ 31ವರೆಗೆ ನಿರ್ಬಂಧಿಸಲಾಗಿದೆ. ಅದರ ಜೊತೆಗೆ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರಕ್ಕೆ ಯಾವುದೇ ವಾಹನ ಓಡಾಟಕ್ಕೆ ಅವಕಾಶ ನೀಡದಿರಲು ಚರ್ಚೆ ಮಾಡುತ್ತಿದ್ದೇವೆ ಎಂದರು. ಬಸ್ ನಿಲ್ದಾಣಗಳಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್​ ಮಾಡಲಾಗುತ್ತದೆ. ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ ಎಂದು ಹೇಳಿದರು.

ABOUT THE AUTHOR

...view details