ಬೆಂಗಳೂರು :ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಸೋಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಹಾತ್ವಾಕಾಂಕ್ಷೆಯ ಎರಡು ಕನಸನ್ನ ಒಟ್ಟಿಗೆ ಮಣ್ಣುಪಾಲಾಗಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಡೆದ ಮೊಟ್ಟಮೊದಲ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಾವು ಅನಿವಾರ್ಯ ಹಾಗೂ ತಾವೊಬ್ಬ ಪ್ರಬಲ ಒಕ್ಕಲಿಗ ನಾಯಕ ಎಂಬುದನ್ನು ಬಿಂಬಿಸಿಕೊಳ್ಳಲು ಮುಂದಾಗಿದ್ದರು.
ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ಪಕ್ಷ ತ್ಯಜಿಸಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿದ್ದ ಮುನಿರತ್ನ ವಿರುದ್ಧ ಸೇಡು ತೀರಿಸಿಕೊಳ್ಳುವುದು ಹಾಗೂ ಒಕ್ಕಲಿಗ ಪ್ರಾಬಲ್ಯ ಉಳ್ಳ ಕ್ಷೇತ್ರದಲ್ಲಿ ಒಂದಾದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಇದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಜಾತಿ ಬಲ ಹಾಗೂ ಅದರ ಮೇಲಿರುವ ತಮ್ಮ ಹಿಡಿತ ತೋರಿಸಲು ಪ್ರಯತ್ನಿಸಿದ್ದರು. ಆದರೆ, ಈ ಎಲ್ಲ ಪ್ರಯತ್ನ ಮಣ್ಣುಪಾಲಾಗಿದೆ.
ಕ್ಷೇತ್ರದೆಲ್ಲೆಡೆ ನಿರಂತರ ಸುತ್ತಾಡಿ ತಮ್ಮ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಪರ ಪ್ರಚಾರ ನಡೆಸಿದ ಡಿ ಕೆ ಶಿವಕುಮಾರ್ ಹಾಗೂ ಅವರ ಸೋದರ ಮತ್ತು ಸಂಸದರಾಗಿರುವ ಡಿ ಕೆ ಸುರೇಶ್ ಪ್ರಯತ್ನಕ್ಕೆ ಮತದಾರ ಕೈಹಿಡಿದಿಲ್ಲ. ನಿರೀಕ್ಷೆಗೂ ಮೀರಿದ ಹೀನಾಯ ಸೋಲಿಗೆ ಕಾಂಗ್ರೆಸ್ ತುತ್ತಾಗಿದೆ. ಈ ಮೂಲಕ ಡಿ ಕೆ ಶಿವಕುಮಾರ್ ನಾಯಕತ್ವಕ್ಕೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮತದಾರರಿಂದ ಸ್ಪಷ್ಟ ನಿರಾಕರಣೆ ವ್ಯಕ್ತವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಮುದುಡಿದ 'ಕುಸುಮ' : ವಿಫಲವಾಯ್ತು 'ಟ್ರಬಲ್ ಶೂಟರ್' ತಂತ್ರ ಉಪ ಚುನಾವಣೆ ಗೆಲುವಿನ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ತಾವೊಬ್ಬ ಅನಿವಾರ್ಯ ನಾಯಕ ಹಾಗೂ ಒಕ್ಕಲಿಗ ಸಮುದಾಯದಲ್ಲಿ ತಾವೊಬ್ಬ ಪ್ರಭಾವಿ ಮುಖಂಡ ಎನಿಸಿಕೊಳ್ಳಲು ನಡೆಸಿದ ಯತ್ನ ಆರಂಭದಲ್ಲೇ ಎಡವಿದೆ. ಬೆಂಗಳೂರು ನಗರ ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗೆ ಡಿ ಕೆ ಶಿವಕುಮಾರ್ ಪ್ರಭಾವ ಸೀಮಿತವಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಬಳ್ಳಾರಿ, ಧಾರವಾಡ, ಬೆಳಗಾವಿ ಹಾಗೂ ಶಿವಮೊಗ್ಗದಲ್ಲಿ ನಡೆದ ಉಪ ಚುನಾವಣೆಗಳ ಸಂದರ್ಭದಲ್ಲಿ ತಮ್ಮ ಪ್ರಭಾವ ಮೆರೆಯಲು ಹೋಗಿ ವಿಫಲರಾಗಿದ್ದರು.
ಆದರೆ, ಇದೀಗ ಇನ್ನೊಂದು ಯತ್ನ ಎಂಬಂತೆ ತಮ್ಮ ಸಮುದಾಯದವರು ಹೆಚ್ಚಿರುವ ರಾಜರಾಜೇಶ್ವರಿ ನಗರದ ಗೆಲುವಿಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ಕಾಂಗ್ರೆಸ್‌ನ ಪ್ರಶ್ನಾತೀತ ನಾಯಕರಾಗುವ ಕನಸು ಹೊತ್ತಿರುವ ಶಿವಕುಮಾರ್ ಸೋಲಿನ ಮೂಲಕ ಹಲವರ ಟೀಕೆಗೆ ಒಳಗಾಗಬೇಕಾಗಿದೆ. ಕಾಂಗ್ರೆಸ್ ಪಕ್ಷ ಮುನ್ನಡೆಸುವ ಪ್ರಮುಖ ನಾಯಕರಾಗಿ ನಿರ್ಮಿಸಿಕೊಳ್ಳುವ ಯತ್ನಕ್ಕೂ ಭಾರೀ ಹಿನ್ನಡೆ ಉಂಟಾಗಿದೆ.
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದು, ಅದಕ್ಕೆ ಪರ್ಯಾಯ ನಾಯಕತ್ವ ರೂಪಿಸುವ ಡಿಕೆಶಿ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಇದೀಗ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಸೋದರರು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದರು. ಆದರೆ, ರಾಜರಾಜೇಶ್ವರಿ ಇವರ ಕೈಹಿಡಿದಿಲ್ಲ. ಈ ಒಂದು ಸೋಲು ಇವರ ನಾಯಕತ್ವದ ಯಶಸ್ಸನ್ನು ಪ್ರಶ್ನಿಸುವ ಸನ್ನಿವೇಶವನ್ನು ಸೃಷ್ಟಿಸಿದೆ.
ಡಿ ಕೆ ಶಿವಕುಮಾರ್ ಹಳೇ ಮೈಸೂರು ಭಾಗಕ್ಕೆ ಮಾತ್ರ ಪ್ರಭಾವಿ ಹಾಗೂ ಸೀಮಿತ ನಾಯಕರು ಎಂಬ ಆರೋಪವನ್ನು ಹಲವು ಕಾಂಗ್ರೆಸ್ ನಾಯಕರು ಮಾಡುತ್ತಿದ್ದರು. ಆದರೆ, ಇದೀಗ ಅದೇ ಭಾಗದಲ್ಲಿ ನಡೆದ ಚುನಾವಣೆಯಲ್ಲಿ ಸೋಲುವ ಮೂಲಕ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಉಪ ಚುನಾವಣೆ ಗೆಲುವಿನ ಮೂಲಕ ತಮ್ಮ ಬಲ ಹೆಚ್ಚಿಸಿಕೊಳ್ಳಲು ಮುಂದಾಗಿದ್ದ ಶಿವಕುಮಾರ್, ಸೋಲಿನ ಕಹಿಯೊಂದಿಗೆ ಜನಪ್ರಿಯತೆಯನ್ನೂ ಒಂದಿಷ್ಟು ಕಳೆದುಕೊಂಡಿದ್ದಾರೆ ಎಂದು ಕೆಲ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.