ಬೆಂಗಳೂರು: ಮಧುಮೇಹದಂತಹ ಕಾಯಿಲೆಯನ್ನು ಪ್ರಪಂಚದ ಹಲವಾರು ಮಂದಿ ಎದುರಿಸುತ್ತಿದ್ದಾರೆ. ಇದೊಂದು ನಿರ್ವಹಣೆ ಮಾಡುವಂತಹ ಕಾಯಿಲೆಯಾಗಿದ್ದು, ಇದೇ ಕಾರಣ ನೀಡಿ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡುವುದನ್ನು ನಿರಾಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪತ್ನಿ ಮತ್ತು ಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳ ಜೀವನಾಂಶ ನೀಡುವಂತೆ ಸೂಚನೆ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ಕೆ.ಜಿ. ಅನಂತಕುಮಾರ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಜೀವನಾಂಶವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು. ಅಲ್ಲದೇ, ಜಗತ್ತಿನಾದ್ಯಂತ ಬಹುತೇಕ ಜನಸಂಖ್ಯೆ ಮಧುಮೇಹದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಅದನ್ನು ನಿರ್ವಹಣೆ ಮಾಡಬಹುದು. ಸೂಕ್ತ ವೈದ್ಯಕೀಯ ಆರೈಕೆ ಇದ್ದರೆ ಆ ಕಾಯಿಲೆಯನ್ನು ನಿರ್ವಹಿಸಬಹುದು. ಆದರೆ ಮಧುಮೇಹವಿದೆ ಎಂಬ ಕಾರಣಕ್ಕೆ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲಾಗದು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರು, ಮಧುಮೇಹಸಂಬಂಧಿ ರೋಗಗಳಿಂದ ಬಳಲುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳಿಗೆ ಕಳೆದ ಮೂರು ವರ್ಷಗಳಿಂದ ಜೀವನಾಂಶ ನೀಡಲಾಗುತ್ತಿಲ್ಲ ಎಂದು ವಾದ ಮಂಡಿಸಿದ್ದರು. ಈ ಅಂಶವನ್ನು ತಿರಸ್ಕರಿಸಿರುವ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮುಂದುವರೆಸಲು ಸೂಚನೆ ನೀಡಿದೆ. ಜೊತೆಗೆ, ತನಗೆ ಆಗ್ಗಾಗೆ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಹಾಗೂ ಪತ್ನಿ ಉದ್ಯೋಗದಲ್ಲಿದ್ದು, ಆಕೆಗೆ ಜೀವನಾಂಶದ ಅಗತ್ಯವಿಲ್ಲ. ಅಕೆ ಅಪ್ರಾಪ್ತ ಮಗುವಿನೊಂದಿಗೆ ಬಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂಬ ಪತಿಯ ವಾದವನ್ನೂ ಸಹ ನ್ಯಾಯಾಲಯ ತಿರಸ್ಕರಿಸಿದೆ.
ಪತ್ನಿ ತನ್ನ ಜೀವನಕ್ಕೆ ಮತ್ತು ಮಗುವಿನ ಆರೈಕೆ ಸಾಕಾಗುವಷ್ಟು ದುಡಿಯುತ್ತಿದ್ದರೂ ಸಹ ಸಂಸತ್ ಅನುಮೋದಿಸಿರುವ ಅಪರಾಧ ದಂಡ ಸಂಹಿತೆ ಸೆಕ್ಷನ್ 125, ಮಹಿಳೆಯರ ವಿರುದ್ಧದ ಕೌಟುಂಬಿಕದ ದೌರ್ಜನ್ಯ ತಡೆ ಕಾಯಿದೆ 2005 ಮತ್ತು ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 24ರ ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ ದೈಹಿಕವಾಗಿ ದುಡಿಯುವ ಸಾಮರ್ಥ್ಯವಿದ್ದರೆ ಆತ ಪತ್ನಿ ಹಾಗೂ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶವನ್ನು ಪಾವತಿಸಲೇಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ.
ಇದನ್ನೂ ಓದಿ:ಕರಾವಳಿ ತೀರ ಸವೆತ ಸಮಸ್ಯೆ: ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮೊರೆ ಹೋಗುವಂತೆ ಹೈಕೋರ್ಟ್ ನಿರ್ದೇಶನ