ಬೆಂಗಳೂರು : ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಬಹಿರಂಗವಾಗಿ ಮದ್ಯದಂಗಡಿಗಳು ಬಂದ್ ಆಗಿದ್ದರೂ ಕಾಳ ಸಂತೆಯಲ್ಲಿ ಮದ್ಯ ದುಬಾರಿ ಬೆಲೆಗೆ ರಾಜಧಾನಿಯ ಬಹುತೇಕ ಭಾಗಗಳಲ್ಲಿ ಸಿಗುತ್ತಿದೆ.
ಮೂಲಗಳ ಪ್ರಕಾರ, 100 ರೂ. ಬೆಲೆಯ ಕ್ವಾರ್ಟರ್ ಮದ್ಯದ ಬೆಲೆ ಸಾವಿರ ರೂ., ಸಾವಿರ ರೂ. ಮದ್ಯದ ಬಾಟಲ್ಗೆ 10 ಸಾವಿರ ರೂ. ಹೀಗೆ ರಾಜಧಾನಿಯ ಬಹುತೇಕ ಭಾಗಗಳಲ್ಲಿ ಕೇಸುಗಟ್ಟಲೆ ಮದ್ಯ ಸಿಗುತ್ತಿದೆ. ಅರ್ಥಾತ್, ದುಡ್ಡಿದ್ದವರಿಗೆ ಮದ್ಯ ಸಿಗುವುದರಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಹೀಗೆ ಮಾರಾಟವಾಗುತ್ತಿರುವ ಮದ್ಯದ ಮೂಲ ಯಾವುದು? ಎಂಬುದು ಬಹಿರಂಗವಾಗದಿದ್ದರೂ ಕಾಳಸಂತೆಯಲ್ಲಿ ಮಾರಾಟ ಮಾಡುವ ದಲ್ಲಾಳಿಗಳು ಮಾತ್ರ ದಂಡಿಯಾಗಿದ್ದಾರೆ.
ನಗರದ ಯಾವುದೇ ಪ್ರದೇಶಕ್ಕೆ ಹೋಗಿ ಅಲ್ಲಿ ಸಣ್ಣ ಮಟ್ಟದ ಪ್ರಭಾವ ಇರುವವರ ಪೈಕಿ ಬಹುತೇಕರು ಈಗ ಕಾಳಸಂತೆಯಲ್ಲಿ ಮದ್ಯ ಮಾರುವುದನ್ನು ಬಿಸಿನೆಸ್ ಮಾಡಿಕೊಂಡಿದ್ದಾರೆ.
ಇಂತಹ ಬ್ರ್ಯಾಂಡ್‌ನ ಮದ್ಯ ಬೇಕು ಎಂದರೆ ಕೆಲವೇ ಕ್ಷಣಗಳಲ್ಲಿ ಅದು ಪೂರೈಕೆಯಾಗುವಂತೆ ಮಾಡುತ್ತಾರೆ. ಹೀಗಾಗಿ ದುಡ್ಡಿದ್ದವರಿಗೆ ಮದ್ಯದ ಸರಬರಾಜು ಕಡಿಮೆ ಆಗಿಲ್ಲ. ಬದಲಿಗೆ ಲಾಕ್ ಡೌನ್ ಆದರೂ ಹಲವು ಮದ್ಯದಂಗಡಿಗಳ ಮಾಲೀಕರು ಖುಷ್ ಆಗಿದ್ದಾರೆ.
ಹತ್ತು ಜನರಿಗೆ ಮಾರುವುದನ್ನು ಒಬ್ಬರಿಗೆ ಮಾರಿದರೆ ಸಾಕು. ಉಳಿದಂತೆ ಒಂಭತ್ತು ಜನರಿಗೆ ಮಾರುವ ಪ್ರಮೇಯವಿಲ್ಲ. ಹಾಗೆಯೇ ಲಾಕ್ ಡೌನ್ ಕಾಲದಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ ನಷ್ಟವಾದರೂ ಇಂತವರಿಗೆ ಬಂಪರ್ ಲಾಭವಾಗುತ್ತಿದೆ. ಸಂಬಂಧಪಟ್ಟವರಿಗೆ ಇದು ಗೊತ್ತೇ ಇಲ್ಲ ಎಂದುಕೊಂಡರೆ ಅದು ಅವರವರ ಬಾವಕ್ಕೆ ಸಂಬಂಧಿಸಿದ್ದು. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇಲ್ಲ ಎಂದೇನಿಲ್ಲ. ಕಾಳಸಂತೆ ನಡೆಯುತ್ತಿರುವುದನ್ನು ತಡೆಯಲು ಅಬಕಾರಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆ.