ಬೆಂಗಳೂರು:ನಗರ ಪೊಲೀಸ್ ಇತಿಹಾಸದಲ್ಲಿ ಕಂಡು ಕೇಳರಿಯದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ನಡೆದು ಇಂದಿಗೆ ಒಂದು ವರ್ಷ. ಅನ್ಯ ಧರ್ಮದ ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದನ್ನು ಖಂಡಿಸಿ ಆರಂಭಗೊಂಡ ಆಕ್ರೋಶ, ಕಾವಲ್ ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಡುವಷ್ಟರ ಮಟ್ಟಕ್ಕೆ ಹೋಗಿತ್ತು.
ಈ ಬಗ್ಗೆ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ,''ಇಂದಿಗೆ ನಮ್ಮ ಮನೆಗೆ ಹಾಗು ಪೊಲೀಸ್ ಠಾಣೆಗೆ ಬೆಂಕಿ ಇಟ್ಟು ಒಂದು ವರ್ಷ ಆಗಿದೆ. ಈ ವಿಚಾರದಲ್ಲಿ ತೀವ್ರ ನೋವು ಅನುಭವಿಸಿದ್ದೇನೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಕಾನೂನು ಮೂಲಕ ನ್ಯಾಯ ಸಿಕ್ಕಿದೆ. ಆದರೆ ನಮ್ಮ ಪಕ್ಷದಿಂದ ನ್ಯಾಯ ಸಿಕ್ಕಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರತಿಕ್ರಿಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಆರೋಪಿ ಸ್ಥಾನದಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರಂತವರನ್ನು ಪಕ್ಷದಿಂದ ಸಸ್ಪೆಂಡ್ ಮಾಡುವಂತೆ ಸಹ ಮನವಿ ಮಾಡಿರುವುದಾಗಿ ತಿಳಿಸಿದ್ರು.
23ಕ್ಕೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ:
ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಸಂಪತ್ ರಾಜ್, ಮಾಜಿ ಕಾರ್ಪೊರೇಟರ್ ಜಾಕೀರ್ ಹುಸೇನ್, ಸಂಪತ್ ರಾಜ್ ಆಪ್ತ ಅರುಣ್ ರಾಜ್ಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಲಾಗಿದೆ. ಇದೇ ತಿಂಗಳು 23ಕ್ಕೆ ಸುಪ್ರೀಂಕೋರ್ಟ್ನಲ್ಲಿ ಇದು ವಿಚಾರಣೆಗೆ ಬರಲಿದೆ ಎಂದ್ರು.
ಮಸಿಯಲ್ಲೇ ಮುಚ್ಚಿಕೊಂಡಿದೆ ಡಿ ಜೆ ಹಳ್ಳಿಠಾಣೆ:
ಘಟನೆ ನಡೆದು ಒಂದು ವರ್ಷ ಕಳೆದರೂ ಕಿಡಿಗೇಡಿಗಳಿಂದ ಹಾಳಾದಡಿ ಜೆ ಹಳ್ಳಿ ಠಾಣೆಯಲ್ಲಿ ಗಮನಾರ್ಹ ರೀತಿಯಲ್ಲಿ ನವೀಕರಣ ಕೆಲಸವಾಗಿಲ್ಲ. ಕಾರಣ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಘಟನೆಗೆ ಸಾಕ್ಷಿ ಎಂಬಂತೆ ಪಾರ್ಕಿಂಗ್ ಕಾರಿಡಾರ್ ಗೋಡೆ ಹಾಗೂ ಠಾಣೆಯ ಮೊದಲ ಮಹಡಿಯ ಗೋಡೆಗಳೆಲ್ಲೂ ಕಪ್ಪಾಗಿದೆ. ಇದೇ ವ್ಯವಸ್ಥೆಯಲ್ಲೇ 100 ಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಏನದು ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ?
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರ ಸಂಬಂಧಿ ನವೀನ್ ಫೇಸ್ಬುಕ್ನಲ್ಲಿ ಒಂದು ಧರ್ಮದ ಗುರು ಕುರಿತಂತೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ವಿರೋಧ ವ್ಯಕ್ತವಾಗಿತ್ತು. ಅಂದು ಡಿಜೆ ಹಾಗೂ ಕೆಜಿ ಹಳ್ಳಿ ಠಾಣೆಗಳಿಗೆ ಹಾಗೂ ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ಮನೆಗೆ ಸಾವಿರಾರು ಮಂದಿ ಕಿಡಿಗೇಡಿಗಳು ನುಗ್ಗಿ ಧ್ವಂಸ ಮಾಡಿದ್ದರು. ಪೊಲೀಸರು ಗುಂಡಿನ ಚಕಮಕಿ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೂರ್ವ ವಿಭಾಗದ ಪೊಲೀಸರು 400ಕ್ಕಿಂತ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೊತೆಗೆ ಎನ್ ಐಎಎಸ್ಡಿಪಿ ಕಚೇರಿ ಸೇರಿದಂತೆ ಡಿಜೆಹಳ್ಳಿ ಸುತ್ತಮುತ್ತಲಿನ ಸ್ಥಳಗಳಲ್ಲಿ ದಾಳಿ ನಡೆಸಿ ಹಲವರನ್ನು ಬಂಧಿಸಲಾಗಿತ್ತು. ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ರನ್ನ ಬಂಧಿಸಲಾಗಿತ್ತು. ಗಲಭೆಯಲ್ಲಿ ಭಾಗಿಯಾಗಿದ್ದ ಕೆಲ ಆರೋಪಿಗಳಿಗೆ ಇತ್ತೀಚೆಗಷ್ಟೇ ಕೋರ್ಟ್ ಜಾಮೀನು ನೀಡಿತ್ತು.