ಬೆಂಗಳೂರು:ಜೀವಕ್ಕೆ ಅಪಾಯ ಇರುವ ಕಾರಣ ತಮಗೆ ಹೆಚ್ಚಿನ ಭದ್ರತೆ ಒದಗಿಸುವುದಾಗಿ ಹಾಗೂ ಡಿಜೆ ಹಳ್ಳಿ ಗಲಭೆಯಲ್ಲಿ ಯಾರೇ ಅಪರಾಧಿಗಳಾಗಿದ್ದರೂ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ಅವರು, ರಕ್ಷಣೆ ಒದಗಿಸುವಂತೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸಮೂರ್ತಿ, ಬರೀ ಮನೆಗೆ ಮಾತ್ರ ಭದ್ರತೆ ಕೊಟ್ಟಿದ್ದಾರೆ. ಆದರೆ ನಾನು ಎಲ್ಲಿ ಓಡಾಡ್ತೀನೋ ಅಲ್ಲಿಗೆ ಇನ್ನೂ ಭದ್ರತೆ ಕೊಟ್ಟಿಲ್ಲ. ಸದ್ಯ ನನ್ನ ಬಳಿ ಇಬ್ಬರು ಗನ್ಮ್ಯಾನ್ಗಳಿದ್ದಾರೆ. ಅದರ ಜೊತೆಗೆ ಹೆಚ್ಚುವರಿಯಾಗಿ ಭದ್ರತೆ ಕೊಡಿ ಎಂದು ಕೇಳಿದ್ದೇನೆ. ನಾನು ಈ ಹಿಂದೆ ಸರ್ಕಾರಕ್ಕೆ ಮನವಿ ಮಾಡಿದ್ದರೂ ಭದ್ರತೆ ಕೊಟ್ಟಿಲ್ಲ. ಇವತ್ತು ಸಿಎಂ ಭದ್ರತೆ ಕೊಡುವ ಭರವಸೆ ನೀಡಿದ್ದಾರೆ ಎಂದರು.
ಇನ್ನು ಸ್ಥಳೀಯವಾಗಿ ಆಸ್ತಿ ಪಾಸ್ತಿ ನಷ್ಟ ಆಗಿದೆ. ಆಸ್ತಿಪಾಸ್ತಿ ಕಳೆದುಕೊಂಡವರು ಬಡವರು. ಹೀಗಾಗಿ ಅವರಿಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದೇನೆ. ಯಾರೇ ಎಷ್ಟೇ ಪ್ರಭಾವಿ ಆಗಿದ್ದರೂ ಅವರಿಗೆ ಶಿಕ್ಷೆ ಆಗುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಸಿಎಂ ಯಡಿಯೂರಪ್ಪ ಸ್ಪಂದಿಸಿದ್ದಾರೆ ಎಂದರು.
ಕಾಂಗ್ರೆಸ್ ಬಿಡಲ್ಲ:ನಾನಂತೂ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ತಂದೆ ಹಾಗೂ ನನ್ನ ರಕ್ತದಲ್ಲಿ ಇರುವುದು ಕಾಂಗ್ರೆಸ್ ಪಕ್ಷ. ನನ್ನ ರಕ್ಷಣೆಗೆ ಸರ್ಕಾರ ಸೇರಿದಂತೆ ನಮ್ಮ ಪಕ್ಷದ ನಾಯಕರು ಮುಂದಾಗಬೇಕು. ಸಿಎಲ್ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಡಿಕೆ ಶಿವಕುಮಾರ್ ನನ್ನ ರಕ್ಷಣೆಗೆ ಬರಬೇಕು ಎಂದು ಮನವಿ ಮಾಡಿದರು.
ಸರ್ಕಾರದಿಂದ ಒತ್ತಡ ಇಲ್ಲ:ಅಖಂಡ ಶ್ರೀನಿವಾಸ ಮೂರ್ತಿಗೆ ಸರ್ಕಾರದಿಂದ ಒತ್ತಡ ಇದೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನನಗೆ ಯಾವುದೇ ರೀತಿಯ ಒತ್ತಡ ಇಲ್ಲ. ಅಂಥ ಯಾವುದೇ ಕರೆಗಳು ಕೂಡ ಬಂದಿಲ್ಲ ಎಂದರು.
ಜೆಡಿಎಸ್ನ ಪರಾಜಿತ ಅಭ್ಯರ್ಥಿ ಪ್ರಸನ್ನ ಕುಮಾರ್ ಕಾಂಗ್ರೆಸ್ ಸೇರುವ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷಕ್ಕೆ ಯಾರಾದರೂ ಬರಬಹುದು, ಹೋಗಬಹುದು. ಅವರ ಸೇರ್ಪಡೆ ಬಗ್ಗೆ ನಮ್ಮ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಅವರು ಪಕ್ಷಕ್ಕೆ ಬರುವುದರಿಂದ ನಮಗೇನೂ ತೊಂದರೆ ಇಲ್ಲ. ಆದರೆ ಘಟನೆಗೆ ಅಖಂಡ ಆಪ್ತ ಇನ್ಸ್ಪೆಕ್ಟರ್ ಕಾರಣ ಎಂಬ ಪ್ರಸನ್ನ ಕುಮಾರ್ ಹೇಳಿಕೆ ಸರಿಯಲ್ಲ. ಗಲಭೆ ಕುರಿತು ಪೊಲೀಸ್ ಇಲಾಖೆ ತನಿಖೆ ಮಾಡ್ತಿದೆ. ಅದು ಏನೇ ಇದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದರು.
ಬಿಜೆಪಿ ಶಾಸಕರ ಜೊತೆ ಬಂದಿದ್ದಕ್ಕೆ ವಿಶೇಷ ಅರ್ಥ ಬೇಡ: ಅರವಿಂದ ಲಿಂಬಾವಳಿ ಭೋವಿ ಜನಾಂಗದ ಶಾಸಕರು. ನಮ್ಮ ಜನಾಂಗದ ಶಾಸಕರ ಜೊತೆ ನಾನು ಬಂದಿದ್ದೇನೆ. ಭೋವಿ ಜನಾಂಗದ ಅಧ್ಯಕ್ಷ ಮಾಕಳಿ ರವಿಯವರು ಬಂದಿದ್ದಾರೆ. ಅವರ ಜೊತೆಯಲ್ಲಿ ನಾನು ಬಂದು ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.