ಬೆಂಗಳೂರು:ಸದ್ಯ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿದರೆ ಕಾಂಗ್ರೆಸ್ 130 ರಿಂದ 150 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2013-18ರವರೆಗೆ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು. ಇದೀಗ ಜನರು ಕೂಡ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂತಿದ್ದಾರೆ. ನನ್ನ ಅಭಿಪ್ರಾಯ ಕೂಡ ಅದೇ ಆಗಿದ್ದು, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪಕ್ಷದ ನಾಯಕರು. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 130 ರಿಂದ 150 ಸೀಟ್ ಬರಲಿದೆ. ಹಾಗಾಗಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದರು.
ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಎಂದು ಘೋಷಿಸುವಂತೆ ಅವರ ಪರವಿರುವ ಕಾಂಗ್ರೆಸ್ ನಾಯಕರೆಲ್ಲ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇವೆ. ಹೆಸರು ಘೋಷಿಸುವಂತೆ ಅವರ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದರು.
ಕೋವಿಡ್ನಿಂದಾಗಿ ಹೈಕಮಾಂಡ್ ಭೇಟಿಯಾಗಿರಲಿಲ್ಲ. ನಮ್ಮ ಉಸ್ತುವಾರಿಗಳನ್ನು ಭೇಟಿ ಮಾಡಿ ಅವರಿಗೆ ಘಟನೆಯ ವಿವರಣೆ ಕೊಟ್ಟಿದ್ದೇನೆ. ಸಂಪತ್ ರಾಜ್ ವಿರುದ್ಧ ದೂರು ಕೊಟ್ಟಿದ್ದೇನೆ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಿದ್ದೇವೆ. ನಮ್ಮ ವಿರೋಧಿಗಳನ್ನು ಡಿಕೆಶಿ ಜೊತೆ ಸೇರಿಸಿಕೊಂಡು ಓಡಾಡ್ತಿದ್ದಾರೆ. ಸಿದ್ದರಾಮಯ್ಯ, ಜಮೀರ್ ನನ್ನ ಜೊತೆಗಿದ್ದಾರೆ ಎಂದು ಸ್ಪಷ್ಟಪಡಿಸಿದರು.