ಬೆಂಗಳೂರು :ಉತ್ತಮ ಸಂಸದೀಯ ಪಟುತ್ವದ ಪ್ರೇರಣೆ ನೀಡುವ ನಿಟ್ಟಿನಲ್ಲಿ ಸಂಸದೀಯ ಪಟುಗಳಾದ ದಿ.ಎ ಕೆ ಸುಬ್ಬಯ್ಯ ಮತ್ತು ದಿ ಡಾ.ಮಹದೇವ ಬಣಕಾರ್ ಬಗೆಗಿನ ಪುಸ್ತಕವನ್ನು ಇಂದು ವಿಧಾನಸೌಧದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಎ ಕೆ ಸುಬ್ಬಯ್ಯ ಅವರ ಬಗ್ಗೆ ಎಂ ಎಸ್ ಶಶಿಕಲಾಗೌಡ ಅವರು ತುಂಬಾ ಅದ್ಭುತವಾಗಿ ಬರೆದಿದ್ದಾರೆ. ಅವರು ಉತ್ತಮ ಸಂಸದೀಯ ಪಟುವಾಗಿದ್ದವರು. ಇದೇ ರೀತಿ ಎಲ್ಲಾ ಮಹನಿಯರ ವ್ಯಕ್ತಿತ್ವ ಬರಹ ರೂಪದಲ್ಲಿ ಬರಬೇಕು. ಇತಿಹಾಸದಲ್ಲಿ ದಾಖಲಾಗಬೇಕು ಎಂದರು.
ಎ ಕೆ ಸುಬ್ಬಯ್ಯ, ಮಹದೇವ ಬಣಕಾರ್ ಅವರ ಪುಸ್ತಕ ಬಿಡುಗಡೆ ಬಳಿಕ ಸಿಎಂ ಯಡಿಯೂರಪ್ಪ ಮಾತನಾಡಿ, ಸಂಸದೀಯ ಪಟುಗಳಾದ ಎ ಕೆ ಸುಬ್ಬಯ್ಯ, ಮಹಾದೇವ ಬಣಕಾರ್ ಇಬ್ಬರ ಜೀವನ ಸಾರ್ವಜನಿಕ ವಲಯದಲ್ಲಿ ಹಲವಾರು ಜನರಿಗೆ ಮಾದರಿಯಾಗಬೇಕು. ಎ ಕೆ ಸುಬ್ಬಯ್ಯ ಅವರು ವಿದ್ಯಾರ್ಥಿ ಜೀವನದಲ್ಲಿ ನಾಯಕರಾಗಿದ್ದವರು. ಹಲವಾರು ರಾಜಕೀಯ ನಾಯಕರಿಗೆ ಸ್ಫೂರ್ತಿ. ಮಹದೇವ ಬಣಕಾರ್ ರಂಗಭೂಮಿಯಲ್ಲಿ ಹಲವಾರು ಕೆಲಸ ಮಾಡಿದ್ದರು. ಅವರ ಜ್ಞಾನ ಅಗಾಧ, ಅವರು ಯಾವುದೇ ಟಿಪ್ಪಣಿ ಮಾಡಿಕೊಳ್ಳದೆ ಸುಲಲಿತವಾಗಿ ಮಾತಾಡುತ್ತಿದ್ದರು. ವಿಧಾನಸೌಧದ ಗ್ರಂಥಾಲಯದಿಂದ ಈ ಪುಸ್ತಕಗಳನ್ನು ತಂದಿರುವುದು ಔಚಿತ್ಯಪೂರ್ಣ ಎಂದರು.
ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಹಿರಿಯರ ಸಾಧನೆಗಳನ್ನು ಗುರುತಿಸಿ ಸಮಾಜಕ್ಕೆ ಒಂದು ಮಾಹಿತಿ ರವಾನೆ ಮಾಡಬೇಕು. ಮಹದೇವ ಬಣಕಾರ್ ಅವರು ರೈತ ಕುಟುಂಬದವರು, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರಿಗೆ ಇಷ್ಟವಾಗಿದ್ದರು. ಪತ್ರಿಕಾ ರಂಗದಲ್ಲಿ ಕೆಲಸ ಮಾಡಿದ್ದವರು, ಕವನ ಸಂಕಲನಗಳು ಕೂಡ ಇವರು ರಚನೆ ಮಾಡಿದ್ದರು. ಅವರೆ ನಾಟಕ ರಚನೆ ಮಾಡಿ ಅವರೇ ಅಭಿನಯ ಮಾಡಿದ್ದರು. ದೇಶಭಕ್ತಿ, ಹೋರಾಟ ಮೈಸೂರು ಚಲೋ ಭಾಗಿ, ಜೈಲುವಾಸ, ಪ್ರತಿಭಾವಂತ ಸಂಸದೀಯ ಪಟುವಾಗಿದ್ದರು ಎಂದರು.
ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಸಚಿವರಾದ ಸಿ ಟಿ ರವಿ, ಎಸ್ ಟಿ ಸೋಮಶೇಖರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೆ ಜೆ ಜಾರ್ಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.