ಕರ್ನಾಟಕ

karnataka

ETV Bharat / state

ಪಿಎಂ ಮೋದಿ ರೋಡ್ ಶೋನಿಂದ ರೋಗಿಗಳು, ವಿದ್ಯಾರ್ಥಿಗಳಿಗೆ ಸಂಕಷ್ಟ: ಅಜಯ್ ಮಕೆನ್

ಪಿಎಂ ಮೋದಿ ರೋಡ್ ಶೋನಿಂದಾಗಿ ಹಲವರಿಗೆ ಸಮಸ್ಯೆ ಆಗಲಿದೆ ಎಂದು ಅಜಯ್ ಮಕೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ajay Maken
ಅಜಯ್ ಮಕೆನ್

By

Published : May 5, 2023, 4:16 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿನಲ್ಲಿ 9 ಗಂಟೆಗಳ ಕಾಲ ರೋಡ್ ಶೋ ನಡೆಸಲಿದ್ದಾರೆ. ಇದರಿಂದ ರೋಗಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗುವುದಿಲ್ಲ, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷೆಗೆ ತೆರಳಲು ಸಾಧ್ಯವಾಗುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೆನ್ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಜಯ್ ಮಕೆನ್, ಮಣಿಪುರ ಹೊತ್ತಿ ಉರಿಯುತ್ತಿದೆ. ಪರಿಸ್ಥಿತಿ ಹತೋಟಿಗೆ ತರಲು ಕಂಡಲ್ಲಿ ಗುಂಡು ಆದೇಶ ಹೊರಡಿಸಲಾಗಿದೆ. ಆದರೆ ಕೇವಲ ಚುನಾವಣೆ ವಿಚಾರಕ್ಕೆ ಪ್ರಧಾನಮಂತ್ರಿಗಳು ಮೂರು ದಿನಗಳ ಕಾಲ ದೇಶದ ರಾಜಧಾನಿ ಬಿಟ್ಟು ಬರಲು ಸಾಧ್ಯವೇ? ರಾಜ್ಯದಲ್ಲಿ ಚುನಾವಣೆ ಎದುರಿಸಲು ಸ್ಥಳೀಯ ನಾಯಕರು ಇಲ್ಲವೇ?. ದೇಶದ ಭೌಗೋಳಿಕ ವಿಚಾರವಾಗಿ ಮಣಿಪುರ ಬಹಳ ಮಹತ್ವಪೂರ್ಣವಾದ ರಾಜ್ಯವಾಗಿದ್ದು, ಮಣಿಪುರದಲ್ಲಿ ಇಂತಹ ಪರಿಸ್ಥಿತಿ ಇದ್ದಾಗ ದೆಹಲಿಯಲ್ಲಿದ್ದು, ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿರುವುದು ಪ್ರಧಾನಿಯ ಜವಾಬ್ದಾರಿ. ಆದರೆ, ಅವರು ನಿರಂತರ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಕಿಡಿ ಕಾರಿದರು.

ರೋಡ್ ಶೋ ವೇಳೆ ಆ ದಾರಿಯಲ್ಲಿ ಯಾರಿಗೂ ಪ್ರವೇಶವಿಲ್ಲ. ಮನೆಗಳ ಬಾಲ್ಕನಿ, ಮಹಡಿ ಮೇಲೆ ಯಾರೂ ಹೋಗುವಂತಿಲ್ಲ ಎಂದಿದ್ದಾರೆ. ನೀಟ್ ಪರೀಕ್ಷೆ ನಡೆಯುತ್ತಿದ್ದು, ಈ ವಿದ್ಯಾರ್ಥಿಗಳು, ರೋಗಿಗಳ ಪರಿಸ್ಥಿತಿ ಏನು?. ಬಿಜೆಪಿಯದ್ದು 40% ಕಮಿಷನ್ ಸರ್ಕಾರ. ಇಂದು ದಿನಪತ್ರಿಕೆಗಳಲ್ಲಿನ ಜಾಹೀರಾತು ಹಾಗೂ ಅದರಲ್ಲಿ ಬಿಜೆಪಿಯ ಭ್ರಷ್ಟಾಚಾರದ ಪ್ರಮಾಣ ನೋಡಿ ಆಘಾತವಾಗಿದೆ. 1.50 ಲಕ್ಷ ಕೋಟಿ ಹಣವನ್ನು ಈ ಸರ್ಕಾರ ರಾಜ್ಯದ ಜನರಿಂದ ಲೂಟಿ ಮಾಡಿದೆ. ಇದು ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡಿರುವ ಕೊಡುಗೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ 150 ಕ್ಷೇತ್ರಗಳಲ್ಲಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮೋದಿ ರೋಡ್ ಶೋ ಮಾರ್ಗದಲ್ಲಿ ನೀಟ್ ಪರೀಕ್ಷಾ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ: ಶೋಭಾ ಕರಂದ್ಲಾಜೆ

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳ ವಿಚಾರವಾಗಿ ಬಿಜೆಪಿ ಸುಳ್ಳು ಜಾಹೀರಾತು ನೀಡಿದೆ. ಪರಿಷಿಷ್ಟ ಜಾತಿಯ ಮೀಸಲಾತಿಯನ್ನು 15% ರಿಂದ 17%ಕ್ಕೆ, ಪರಿಶಿಷ್ಟ ಪಂಗಡದವರಿಗೆ 3% ರಿಂದ 7%ಕ್ಕೆ ಏರಿಕೆ ಮಾಡಲಾಗಿದೆ ಎಂಬ ಜಾಹೀರಾತು ಪ್ರಕಟಿಸಿದೆ. ಇದೇ ಬಿಜೆಪಿಯ ಕೇಂದ್ರ ಸರ್ಕಾರ ಮಾ.14ರಂದು ಸಂಸತ್ತಿನಲ್ಲಿ ಮೀಸಲಾತಿ ಮೀತಿಯ ಮಿತಿ ಶೇ.50ಕ್ಕಿಂತ ಹೆಚ್ಚಿಸುವುದಿಲ್ಲ ಎಂದು ಹೇಳಿದೆ. ಚುನಾವಣಾ ಆಯೋಗ ಅದಕ್ಕೆ ಅವಕಾಶ ನೀಡಿದ್ದು ಯಾಕೆ? ಈ ಜಾಹೀರಾತಿನ ಬಗ್ಗೆ ಕ್ಷಮೆ ಕೇಳಿ ಇದನ್ನು ಹಿಂಪಡೆಯಬೇಕು. ಇನ್ನು ಒಬಿಸಿ ಮೀಸಲಾತಿ ವಿಚಾರದಲ್ಲೂ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್​ನಲ್ಲಿ ತಡೆ ಹಿಡಿಯಲಾಗಿದೆ. ಬಿಜೆಪಿಯ ಈ ಸುಳ್ಳು ಜಾಹೀರಾತುಗಳನ್ನು ಚುನಾವಣಾ ಆಯೋಗ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ: ಭ್ರಷ್ಟಾಚಾರ ಕಾರ್ಡ್ ಬಿಡುಗಡೆ ಮಾಡಿದ ಪವನ್ ಖೇರಾ

ಶೋಭಾ ಕರಂದ್ಲಾಜೆ ಮಾಹಿತಿ: ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಪಿಎಂ ಸೂಚಿಸಿದ್ದಾರೆ. ಹಾಗಾಗಿ ಪರೀಕ್ಷಾ ದಿನ ಚಿಕ್ಕ ರೋಡ್ ಶೋ ಇರಲಿದೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ABOUT THE AUTHOR

...view details