ಬೆಂಗಳೂರು: ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು ಎಂಜಿನಿಯರ್ ಒಬ್ಬರು 64,900 ರೂ. ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು 64,900 ರೂ. ಕಳೆದುಕೊಂಡ ಎಂಜಿನಿಯರ್ - ಸೈಬರ್ ಖದೀಮರು
ಫ್ಯಾನ್ಸಿ ನಂಬರ್ ಕೊಡಿಸುವುದಾಗಿ ಬಂದ ಮೆಸೇಜ್ ನಂಬಿ ಎಂಜಿನಿಯರ್ ಒಬ್ಬರು ಸಾವಿರಾರು ರೂ. ಹಣ ಕಳೆದುಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಆನ್ಲೈನ್ನಲ್ಲಿ ಹಣ ಪಾವತಿಸಿ ಮೋಸಕ್ಕೊಳಗಾದ ಟೆಕ್ಕಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರದ ಚಿನ್ನಸ್ವಾಮಿ ಮೊದಲಿಯಾರ್ ರಸ್ತೆ ಬಳಿ ವಾಸವಾಗಿರುವ ಶಿವ್ ಎಂಬ 51 ವರ್ಷದ ಎಂಜಿನಿಯರ್ ಮೋಸಕ್ಕೊಳಗಾದವರು. ಸೈಬರ್ ಖದೀಮರು 90999999999 ಎಂಬ ಫ್ಯಾನ್ಸಿ ನಂಬರ್ ಕೊಡಿಸುವುದಾಗಿ ಸಂದೇಶ ಕಳುಹಿಸಿದ್ದಾರೆ. ಇದನ್ನು ನಂಬಿ ಶಿವ್ ಖದೀಮರಿಗೆ ಫೋನ್ ಕರೆ ಮಾಡಿದ್ದಾರೆ. ಈ ವೇಳೆ ಸೈಬರ್ ಖದೀಮರು ಫ್ಯಾನ್ಸಿ ನಂಬರ್ ಪಡೆಯಬೇಕಾದರೆ 64,900 ರೂ. ಹಣ ಕಟ್ಟಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನು ನಂಬಿದ ಶಿವ್ ಆನ್ಲೈನ್ನಲ್ಲಿ ಹಣ ಪಾವತಿಸಿದ್ದಾರೆ.
ಬಳಿಕ ತನ್ನ ಹೊಸ ಸಂಖ್ಯೆಯ ಸಿಮ್ ಪಡೆಯಲು ಕರೆ ಮಾಡಿದಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಹೀಗಾಗಿ ತಕ್ಷಣ ಏರ್ಟೆಲ್ ಸಹಾಯವಾಣಿಗೆ ಸಂಪರ್ಕಿಸಿದಾಗ ಫೇಕ್ ಮೇಸೆಜ್ ಎಂದು ತಿಳಿಸಿದ್ದಾರೆ. ಶಿವ್ ತಾನು ಮೋಸ ಹೋಗಿರುವ ವಿಚಾರ ತಿಳಿದು ನಗರ ಆಯುಕ್ತರ ಕಚೇರಿಯಲ್ಲಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದೆ.