ಬೆಂಗಳೂರು:ಹೆಚ್ಚುತ್ತಿರುವ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನದಿಂದ ಬರುವ ಪ್ರಯಾಣಿಕರಿಗೆ ರಾಜ್ಯ ಪ್ರವೇಶಕ್ಕೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ ಮತ್ತು ರಾಜಸ್ಥಾನಈ ಐದು ರಾಜ್ಯಗಳಿಂದ ವಿಮಾನ, ರಸ್ತೆ, ರೈಲ್ವೆ ಮೂಲಕ ಬರುವ ಪ್ರಯಾಣಿಕರಿಗೆ 15 ದಿನಗಳ ಕಾಲ ನಿರ್ಬಂಧಿಸಲಾಗಿದೆ ಎಂದರು.
ವಿಶೇಷವಾಗಿ ಮಹಾರಾಷ್ಟ್ರ ಮತ್ತು ರಾಜಸ್ಥಾನ ಕಡೆಯಿಂದ ಅತೀ ಹೆಚ್ಚು ಜನ ಬರುತ್ತಿರುವುದರಿಂದ ಈ ಎರಡು ರಾಜ್ಯಕ್ಕೆ ಹೆಚ್ಚು ನಿರ್ಬಂಧ ವಿಧಿಸಲಾಗುತ್ತಿದೆ. ಕಳ್ಳದಾರಿಯಿಂದ ರಾಜ್ಯ ಪ್ರವೇಶ ಮಾಡುವುದನ್ನು ತಡೆಯಲು ಹೆಚ್ಚು ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು, ಹೊರ ರಾಜ್ಯಗಳಿಂದ ಬಂದಿರುವವರು ಸಂಪೂರ್ಣ ಪರೀಕ್ಷೆಗೆ ಒಳಗಾಗಬೇಕು ಹಾಗೂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮತ್ತೆಲ್ಲಿಯೂ ಪ್ರವೇಶಕ್ಕೆ ಅವಕಾಶವಿಲ್ಲ. ಇನ್ನು ಕೆಲವರು ಬೇರೆ ರಾಜ್ಯಗಳಿಂದ ಆಗಮಿಸಲಿದ್ದು, ಅಂತವರನ್ನು ನಾವೇ ಬ್ಯಾಚ್ ಬೈ ಬ್ಯಾಚ್ ಕರೆಸಿಕೊಳ್ಳುತ್ತೇವೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.
ವಯೋಮಿತಿ ಸಡಿಲಿಕೆ:
ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ ಮಾಧುಸ್ವಾಮಿ, ಸಾಮಾನ್ಯ ವರ್ಗಕ್ಕೆ 30 ವರ್ಷ ಮತ್ತು ಮೀಸಲು ಕೆಟಗರಿಗೆ 38 ವರ್ಷದವರಗೆ ಒಂದು ಬಾರಿಗೆ ಸಡಿಲಿಕೆ ನೀಡಲಾಗಿದೆ ಎಂದು ಹೇಳಿದರು.