ಬೆಂಗಳೂರು: ನಾಳೆಯಿಂದ 3 ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಕಲರವ ಇರಲಿದೆ. ಈ ವೇಳೆ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಫೆ. 3ರಿಂದ 5ರವರೆಗೆ ಏರ್ ಶೋ ನಡೆಯಲಿದೆ. ದೇಶ-ವಿದೇಶಗಳಿಂದ ಗಣ್ಯರು ರಾಜಧಾನಿಗೆ ದೌಡಾಯಿಸಿದ್ದಾರೆ. ಪ್ರತಿಷ್ಠಿತ ತಾರಾ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿಯೂ ಪೊಲೀಸರು ಭದ್ರತೆಗೆ ಕ್ರಮ ಕೈಗೊಂಡಿದ್ದಾರೆ.
ಯಲಹಂಕ ವಾಯುನೆಲೆಯಲ್ಲಿ ನಡೆಯುವ ವೈಮಾನಿಕ ಪ್ರದರ್ಶನಕ್ಕೆ 3 ಸುತ್ತಿನ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 4 ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 18 ಡಿಸಿಪಿಗಳು, ಬಹುತೇಕ ಎಲ್ಲಾ ವಲಯದ ಎಸಿಪಿಗಳು, ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐ ಸೇರಿದಂತೆ ಒಟ್ಟು 5,000 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 52 ಕೆಎಸ್ಆರ್ಪಿ, 26 ಸಿಎಆರ್ ತುಕಡಿಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ.