ಬೆಂಗಳೂರು: ಹೃದಯಾಘಾತದಿಂದ ಕಳೆದ ರಾತ್ರಿ ನಿಧನರಾದ ಸಚಿವ ಉಮೇಶ್ ಕತ್ತಿ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ರವಾನಿಸುವ ಕಾರ್ಯದಲ್ಲಿ ವಿಳಂಬವಾಗಿದೆ. ವಿಶೇಷ ವಿಮಾನ ವ್ಯವಸ್ಥೆ ವಿಳಂಬವಾದ ಹಿನ್ನೆಲೆಯಲ್ಲಿ ತವರಿನಲ್ಲಿ ಅಂತಿಮ ದರ್ಶನದ ವ್ಯವಸ್ಥೆಯಲ್ಲೂ ವ್ಯತ್ಯಯವಾಗುವಂತಾಗಿದೆ.
ಬೆಳಗ್ಗೆ 7 ಗಂಟೆಗೆ ಏರ್ ಆಂಬ್ಯುಲೆನ್ಸ್ ಮೂಲಕ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ಕೊಂಡೊಯ್ಯುವ ನಿರ್ಧಾರ ಮಾಡಲಾಗಿತ್ತು. ಆದರೆ ಏರ್ ಲಿಫ್ಟ್ ಮಾಡಲು ಆಂಬ್ಯುಲೆನ್ಸ್ ವ್ಯವಸ್ಥೆ ಇರುವ ವಿಮಾನ ಚೆನ್ನೈನಿಂದ ಬರುವುದಕ್ಕೆ ಮಳೆ ಅಡ್ಡಿಯಾಯಿತು. ಹಾಗಾಗಿ ಹೈದರಾಬಾದ್ನಿಂದ ವಿಶೇಷ ವಿಮಾನವನ್ನು ತರಿಸಿಕೊಳ್ಳಲಾಯಿತು.
ಮಧ್ಯಾಹ್ನ 12.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಬೆಳಗಾವಿಯತ್ತ ಪಾರ್ಥಿವ ಶರೀರವನ್ನು ರವಾನಿಸಲಾಯಿತು. ಕತ್ತಿ ಅವರ ಕುಟುಂಬ ಸದಸ್ಯರು ಈ ವಿಶೇಷ ವಿಮಾನದಲ್ಲಿ ತೆರಳಿದರು. ಮಧ್ಯಾಹ್ನ 1.30 ರ ವೇಳೆಗೆ ಬೆಳಗಾವಿಗೆ ವಿಮಾನ ತಲುಪಲಿದೆ.