ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ 7 ಗಂಟೆ ತಡವಾಗಿ ಟೇಕ್ ಆಫ್ ಆಗಿದೆ, ಏರ್ ಇಂಡಿಯಾ ಕಂಪನಿಯ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂನ್ 11 ರಂದು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಇಂಡಿಯಾದ ವಿಮಾನ ಸಂಖ್ಯೆ AI610 ರಾತ್ರಿ 7:20ಕ್ಕೆ ಟೇಕ್ ಆಪ್ ಆಗಬೇಕಿತ್ತು.
ಆದರೆ, 7 ಗಂಟೆ ತಡವಾಗಿ ಮರುದಿನ ಮುಂಜಾನೆ 4 ಗಂಟೆಗೆ ಟೇಕ್ ಆಪ್ ಆಗಿದೆ. ಹಾಗೆಯೇ ಮುಂಬೈಗೆ ಹೋಗಬೇಕಿದ್ದ ಮತ್ತೊಂದು ಏರ್ ಇಂಡಿಯಾದ AI642 ಸಹ ತಡವಾಗಿ ಟೇಕ್ ಆಪ್ ಆಗಿದೆ. ವಿಮಾನ ನಿಲ್ದಾಣದಲ್ಲಿ ಕಾದು ಕಾದು ಸುಸ್ತಾಗಿದ್ದ ಪ್ರಯಾಣಿಕರು ಏರ್ ಇಂಡಿಯಾ ಕಾರ್ಯವೈಖರಿಯ ಬಗ್ಗೆ ಏರ್ಪೋರ್ಟ್ ನಲ್ಲಿಯೇ ಆಕ್ರೋಶ ಹೊರಹಾಕಿ ಟ್ವಿಟರ್ ನಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
7 ಗಂಟೆ ತಡವಾಗಿ ಟೇಕ್ ಆಫ್ ಆಗಿದ್ದ ಬಗ್ಗೆ ಟ್ವಿಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚಾರ್ಟೆಡ್ ಅಕೌಂಟಡ್ ಅರ್ಜುನ್ ವಿ ಏರ್ ಇಂಡಿಯಾ ಆಡಳಿತ ಮಂಡಳಿಯ ಕಾರ್ಯಾಚರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂಕಣಕಾರರಾದ ಕಲ್ಪನಾ ಶರ್ಮಾ ಟ್ವೀಟ್ ಮಾಡಿ ವೋಲ್ವಾ ಬಸ್ ಬೆಂಗಳೂರಿನಿಂದ ಮುಂಬೈ ತಲುಪಲು 18ಗಂಟೆ ತೆಗೆದುಕೊಳ್ಳುತ್ತೆ, ಕನಿಷ್ಠಪಕ್ಷ ನೀವು ಮುಂಬೈಗೆ 15 ಗಂಟೆಗಳಾದರೂ ತೆಗೆದುಕೊಳ್ಳಿ ಎಂದು ಛಾಟಿ ಬೀಸಿದ್ದಾರೆ.