ಬೆಂಗಳೂರು : ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಜನ ವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ತರಾತುರಿಯಲ್ಲಿ ಮಂಡನೆ ಮಾಡಬಾರದು. ಇದಕ್ಕೂ ಮುನ್ನ ಮಸೂದೆ ಬಗ್ಗೆ ಸಂಬಂಧಪಟ್ಟ ವಿದ್ಯುತ್ ಇಂಜಿನಿಯರ್‌ಗಳು, ಜನಸಾಮಾನ್ಯರು, ರೈತರು, ವಿವಿಧ ಪಾಲುದಾರರ ಜೊತೆ ಸಮಾಲೋಚಿಸಬೇಕು ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಷನ್ ಸರ್ಕಾರವನ್ನು ಆಗ್ರಹಿಸಿದೆ.
ನಗರದಲ್ಲಿ ಶನಿವಾರ ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಷನ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಮಸೂದೆ ಮಂಡಿಸಲು ಬಿಡಬಾರದು ಎಂಬ ನಿರ್ಣಯ ಕೈಗೊಂಡಿತು. ಇದರಿಂದ ಖಾಸಗಿ ವಲಯಕ್ಕೆ ಅನುಕೂಲವಾಗಲಿದ್ದು, ಗ್ರಾಹಕರು ಮತ್ತು ವಿದ್ಯುತ್ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ, ರೈತ ಸಮುದಾಯಕ್ಕೆ ಭಾರಿ ಅನ್ಯಾಯವಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಎಐಪಿಇಎಫ್ನ ಅಧ್ಯಕ್ಷ ಶೈಲೇಂದ್ರ ದುಬೆ ಮಾತನಾಡಿ, "ರೈತರೊಂದಿಗೆ ಚರ್ಚೆ ನಡೆಸಿದ ನಂತರವೇ ಮಸೂದೆ ಮಂಡಿಸುವುದಾಗಿ ಕೇಂದ್ರ ಸರ್ಕಾರ ಕಿಸಾನ್ ಮೋರ್ಚಾಗೆ ಪತ್ರ ಬರೆದಿದೆ. ಆದರೆ, ಮಸೂದೆ ಮಂಡನೆಗೆ ಸಂಪುಟದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಇದರಿಂದ ವಿದ್ಯುತ್ ವಲಯದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿಲ್ಲ. ಹೊಸ ಮಸೂದೆಯಿಂದ ಸಬ್ಸಿಡಿ ರದ್ದಾಗಲಿದ್ದು, ಎಲ್ಲಾ ವೆಚ್ಚವನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ರೈತರು ಪ್ರತಿ ತಿಂಗಳು ಕೃಷಿ ಪಂಪ್ ಸೆಟ್ಗೆ 10 ರಿಂದ 12 ಸಾವಿರ ರೂಪಾಯಿ ವಿದ್ಯುತ್ ಬಿಲ್ ಪಾವತಿಸುವ ಪರಿಸ್ಥಿತಿ ಎದುರಾಗಲಿದೆ" ಎಂದು ಕಳವಳ ವ್ಯಕ್ತಪಡಿಸಿದರು.