ಬೆಂಗಳೂರು : ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳನ್ನು ಗೆಲ್ಲುವುದರ ಜೊತೆಗೆ ಸ್ಥಳೀಯ ಸಂಸ್ಥೆಗಳು ಹಾಗು ದಕ್ಷಿಣ ಭಾರತದ ಬಿಜೆಪಿ ಭದ್ರಕೋಟೆಯಾಗಿರುವ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡುತ್ತೇನೆ. ಹೋರಾಟಗಳ ಮೂಲಕ ಭ್ರಷ್ಟ ಸರ್ಕಾರಕ್ಕೆ ಉತ್ತರ ಕೊಡುವ ಕೆಲಸ ಮಾಡುತ್ತೇನೆ. ಹಗಲಿರುಳು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭರವಸೆ ನೀಡಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ರಾಜ್ಯ ಬಿಜೆಪಿಯನ್ನು ಜವಾಬ್ದಾರಿಯನ್ನು ಇಂದು ಹೊತ್ತುಕೊಂಡಿದ್ದೇನೆ. ಪಕ್ಷದ ಮುಖಂಡರು, ಸಂಘ ಪರಿವಾರದ ಮುಖಂಡರು ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ. ಶಿಕಾರಿಪುರ ತಾಲೂಕಿನ ಎಲ್ಲಾ ಹಿರಿಯರು, ಸಂಘಟನೆಯ ಮುಖಂಡರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂಘಟಕರನ್ನು ಸ್ಮರಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಘೋಷಣೆ ಮಾಡಿದ ನಂತರ ರಾಜ್ಯದ ಎಲ್ಲ ಹಿರಿಯರ ಜೊತೆ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಎಲ್ಲರೂ ಒಗ್ಗಟ್ಟಿನಿಂದ ನೀನು ಮುನ್ನುಗ್ಗು, ನಿನಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅಭಯ ನೀಡಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮ ಗುರಿ. ಅದಕ್ಕಾಗಿ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದೊಂದೇ ನಮ್ಮ ಮುಂದಿನ ಗುರಿಯಾಗಿದೆ.
ಈ ಹಿಂದೆ 20 ಕ್ಷೇತ್ರ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾಗ ಅವರ ಹೇಳಿಕೆಯನ್ನು ಹಾಸ್ಯ ಮಾಡಿದ್ದರು. ಆದರೆ ಅದನ್ನು ಯಡಿಯೂರಪ್ಪ ಸಾಧಿಸಿದ್ದರು. ಈಗ ಲೋಕಸಭಾ ಚುನಾವಣೆಗೆ ಹಗಲು ರಾತ್ರಿ ಶ್ರಮ ಹಾಕಬೇಕಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ನಿಜ, ಈಗ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ ಅಂದರೆ ಆ ಸ್ಥಾನದ ಮಹತ್ವ ಮತ್ತು ಗೌರವ ನನಗೆ ಗೊತ್ತಿದೆ. ಯಡಿಯೂರಪ್ಪನವರ ಹೋರಾಟವನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಪಕ್ಷದ ಯಾರೂ ತಲೆತಗ್ಗಿಸಿಕೊಂಡು ಹೋಗಲು ಅವಕಾಶ ಕೊಡುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.