ಕರ್ನಾಟಕ

karnataka

ETV Bharat / state

ಮಾಧ್ಯಮಗಳು ಜೀವಂತವಾಗಿರದೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ : ಖರ್ಗೆ - ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ

ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ- ಸಾಮಾನ್ಯ ಸಂಸದರನ್ನು ಸಚಿವರನ್ನಾಗಿ ಮಾಡುವ ಶಕ್ತಿ ಮಾಧ್ಯಮಗಳಿಗಿದೆ- ಮಲ್ಲಿಕಾರ್ಜುನ್​ ಖರ್ಗೆ ಪ್ರತಿಪಾದನೆ

2022 Person of the Year Award Ceremony
2022ನೇ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ

By

Published : Dec 31, 2022, 5:48 PM IST

ಬೆಂಗಳೂರು :ಪ್ರಸ್ತುತ ಜಗತ್ತಿನಲ್ಲಿ ಮಾಧ್ಯಮ ಎನ್ನುವುದು ಅತ್ಯಂತ ಪ್ರಮುಖ ಸಂವಹನ ಕ್ಷೇತ್ರವಾಗಿದ್ದು, ಇದು ಜೀವಂತವಾಗಿರದೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಶನಿವಾರ ಆಯೋಜಿಸಿದ್ದ 2022ನೇ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮಾಧ್ಯಮಗಳು ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಪತ್ತೆ ಹಚ್ಚಿ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು. ಜೊತೆಗೆ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುವುದು ಅತ್ಯಂತ ಮುಖ್ಯ ಕರ್ತವ್ಯವಾಗಬೇಕು ಎಂದು ಹೇಳಿದರು.

ಪತ್ರಿಕೋದ್ಯಮ ಕ್ಷೇತ್ರದವರು ಸತ್ಯವನ್ನು ತಿಳಿಸುತ್ತಾರೆ ಎಂಬ ಕಾರಣಕ್ಕೆ ಮಾಧ್ಯಮಗಳ ಮಾಲೀಕರು ಅಥವಾ ಪತ್ರಕರ್ತರ ಕಡೆ ಜನ ನೋಡುವುದಲ್ಲದೆ, ನಿಮ್ಮ ಬರವಣಿಗೆ, ನೀವು ಹೇಳಿದ ಮಾತಿನ ಮೇಲೆ ನಾವು ಸಂಸತ್‌ನಲ್ಲಿ ಚರ್ಚೆಗಳನ್ನು ಮಾಡುತ್ತೇವೆ ಎಂದರು.

ಮುಂದಿನ ಪೀಳಿಗೆ ಉತ್ತಮ ಜೀವನ ನಡೆಸಬೇಕಾದರೆ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ. ಹಾಗಾಗಿ ಮಾಧ್ಯಮಗಳು ಕೈ ಕಟ್ಟಿ ಕುಳಿತದಲ್ಲಿ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರಜಾಪ್ರಭುತ್ವ ಉಳಿಯಬೇಕಾದಲ್ಲಿ ಮಾಧ್ಯಮಗಳು ಪಾತ್ರ ಅತ್ಯಂತ ಮುಖ್ಯವಾಗಿದೆ. ಜೊತೆಗೆ, ಅನ್ಯಾಯಕ್ಕೊಳಗಾದವರ ಪರವಾಗಿ ಮಾಧ್ಯಮಗಳು ನಿಲ್ಲಬೇಕು. ಅವಕಾಶ ಸಿಕ್ಕಲ್ಲಿ ಆ ಕೆಲಸ ಮಾಡಿ ಎಂದು ಅವರು ಸಲಹೆ ನಿಡಿದರು.

ಕೇಂದ್ರ ಸಚಿವರಾಗಿದ್ದು ಮಾಧ್ಯಮಗಳಿಂದ:ಕೇಂದ್ರ ಸಚಿವರಾಗುವುದಕ್ಕೂ ಮುನ್ನ ರಾಜ್ಯದಿಂದ ಆರು ಜನ ಸಂಸದರಿದ್ದರು. ಆ ಸಂದರ್ಭದಲ್ಲಿ ಎಸ್. ಎಂ. ಕೃಷ್ಣ, ವೀರಪ್ಪ ಮೋಯ್ಲಿಗೆ ಮಂತ್ರಿ ಸ್ಥಾನ ಪ್ರಕಟವಾಗಿತ್ತು. ಈ ಸಂದರ್ಭದಲ್ಲಿ ಖರ್ಗೆ ಅವರಿಗೆ ಅನ್ಯಾಯವಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದೇ ಸಂದರ್ಭದಲ್ಲಿ ಬೋದಗಯಾಗೆ ತೆರಳಿದ್ದೆ. ಆಗ ಗುಲಾಂ ನಬಿ ಆಜಾದ್ ಕರೆ ಮಾಡಿ ಯಾಕೆ ಹೋಗಿದ್ದೀರಾ ಇಲ್ಲಿ ಎಲ್ಲರೂ ಕಾಯುತ್ತಿದ್ದಾರೆ ಎಂದು ಕೇಳಿದ್ದರು.

ನಾನು ಆ ಸಂದರ್ಭದಲ್ಲಿ ರಾಜ್ಯದ ಇಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿದೆಯಲ್ಲಾ ಎಂದು ತಿಳಿಸಿದಾಗ, ಅದಕ್ಕೆ ಮಾಧ್ಯಮದವರು ಖರ್ಗೆಗೆ ಅನ್ಯಾಯವಾಗಿದೆ ಅಂತ ಬರೆದಿದ್ದರಿಂದ ನಿಮಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವಿವರಿಸಿದರು. ಅಲ್ಲದೆ, ಒಬ್ಬ ಸಾಮಾನ್ಯ ಸಂಸದರನ್ನು ಸಚಿವರನ್ನಾಗಿ ಮಾಡುವ ಶಕ್ತಿ ಮಾಧ್ಯಮಗಳಿಗಿದೆ ಎಂದು ಅವರು ಹೇಳಿದರು.

ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಕೈಗಾರಿಕಾ ಕ್ರಾಂತಿ ನಡೆದಿರುವುದು ಕರ್ನಾಟಕದಲ್ಲಿ. ಇತ್ತೀಚೆಗೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದವಾಗಿದ್ದು 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಮಾಧ್ಯಮದ ವಿವಿಧ ವಿಭಾಗದ 32 ಸಾಧಕರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಮತ್ತಿತರರು ಉಪಸ್ಥಿತರಿದ್ದರು.

ಖರ್ಗೆ ಅಸಮಾಧಾನ: ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡುವ ಮೊದಲೇ ವಿಶೇಷ ಪ್ರಶಸ್ತಿ ಹೆಸರಿನಲ್ಲಿನ ಸಚಿವರಿಗೆ ಸನ್ಮಾನ ಮಾಡಲಾಯಿತು. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತ ಪಡಿಸಿದರು. ಅಲ್ಲದೆ, ಪ್ರೆಸ್‌ಕ್ಲಬ್‌ನಲ್ಲಿ ದುಡ್ಡೇ ದೊಡ್ಡಪ್ಪ ಎನ್ನುವಂತಾಗಿದ್ದು, ನೀವಾಗಿಯೇ ನನಗೆ ಆಹ್ವಾನ ನೀಡಿದ್ದು, ನಾನಾಗಿ ಬಂದಿಲ್ಲ. ನಿಮಗೆ ಮಂತ್ರಿಗಳೇ ದೊಡ್ಡವರು ಆಗಿದ್ದಾರೆ. ಅದಕ್ಕಾಗಿ ನಾನ್ಯಾಕೆ ಇಲ್ಲಿಗೆ ಬರಬೇಕಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬರೀ ಬೂಟಾಟಿಕೆ ಪಾರ್ಟಿ ಬಿಜೆಪಿ: ಸುಳ್ಳುಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುವ ಕರ್ಮ ನಿಮಗೇಕೆ ಬಂತು ಶಾ ಜೀ.. ಹೆಚ್​ಡಿಕೆ

ABOUT THE AUTHOR

...view details