ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯದ ನಗೆ ಬೀರಿದೆ. ಪಕ್ಷ ಪೂರ್ಣ ಬಹುಮತವನ್ನು ಸಾಧಿಸಿರುವುದರಿಂದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ. ಚಿತ್ತಾಪೂರ ವಿಧಾನಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಗೆಲುವು ಸಾಧಿಸಿದ್ದಾರೆ. 13 ಸಾವಿರಕ್ಕೂ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ವಿರುದ್ಧ ಜಯಶಾಲಿಯಾಗಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಒಳ್ಳೆ ಕೆಲಸ ಮಾಡಿದ್ರೆ ಜನರು ಒಳ್ಳೆಯವರ ಕೈ ಹಿಡಿಯುತ್ತಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
"ಜನರು ಪ್ರಬುದ್ಧರು ಎಂಬುದನ್ನು ಸಾಬೀತುಪಡಿಸಿದ್ದಾರೆ. ನಾವು ಯಾವತ್ತಿಗೂ ದ್ವೇಷ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ವಿಕ್ಟರಿ ಜನರ ವಿಕ್ಟರಿ. ಜನ ತಾವಾಗಿಯೇ ಎದ್ದು ಮತ ನೀಡಿದ್ದಾರೆ. ಕೆಟ್ಟ ಆಡಳಿತದ ವಿರುದ್ಧ ರೊಚ್ಚಿಗೆದ್ದು ಮತ ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಜನರು ಪ್ರಬುದ್ಧ ಮತದಾರರು ಎಂಬುದು ಗೊತ್ತಾಗುತ್ತಿದೆ" ಎಂದು ಹೇಳಿದರು.
"ಡಜನ್ ಗಟ್ಟಲೆ ಸೆಂಟ್ರಲ್ ಮಿನಿಸ್ಟರ್ಗಳು, ಪ್ರಧಾನಿ ಎಲ್ಲರೂ ಓಣಿ ಓಣಿ ಸುತ್ತಿದ್ದೇ ಬಂತು. ಮ್ಯಾನ್ ಪವರ್, ಮಸಲ್ ಪವರ್ ಯಾವುದಕ್ಕೂ ಜನ ಮೋಸ ಹೋಗಲಿಲ್ಲ. ಇದಕ್ಕೆ ಜನ ಬಲಿಯಾಗದೇ ನಮಗೆ ಮತ ಹಾಕಿದ್ದಾರೆ. ಒಳ್ಳೆ ಕೆಲಸ ಮಾಡಿದರೆ ಮತದಾರರು ಒಳ್ಳೆಯವರದ್ದೇ ಕೈ ಹಿಡಿತಾರೆ. ಸೋಲಲಿ, ಗೆಲ್ಲಲಿ ಜನರ ಮಧ್ಯೆ ಇರಬೇಕು. ಇದು ಕೇವಲ ಒಬ್ಬರ ಗೆಲುವಲ್ಲ, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದಕ್ಕೆ ನಾವು ಗೆದ್ದಿದ್ದೇವೆ" ಎಂದು ಖರ್ಗೆ ಗೆಲುವಿನ ಗುಟ್ಟನ್ನು ತಿಳಿಸಿದರು.