ಬೆಂಗಳೂರು :ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಹೈಕಮಾಂಡ್, ಧರ್ಮದ ವಿಚಾರಕ್ಕೆ ಕೈ ಹಾಕದಂತೆ ರಾಜ್ಯ ನಾಯಕರಿಗೆ ತಾಕೀತು ಮಾಡಿದೆ. ಮಾಜಿ ಸಚಿವ ಎಂ ಬಿ ಪಾಟೀಲ್ರ ಪ್ರತ್ಯೇಕ ಧರ್ಮದ ಬಗ್ಗೆ ಸೂಚ್ಯವಾಗಿ ಹೇಳಿಕೆ ವಿವಾದಕ್ಕೆ ತಿರುಗುತ್ತಿದ್ದ ಹಾಗೇ ಎಚ್ಚೆತ್ತ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ, ಈ ಬಗ್ಗೆ ಸೂಚನೆ ನೀಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಎಂ ಬಿ ಪಾಟೀಲ್, ವಿನಯ್ ಕುಲಕರ್ಣಿ ಪ್ರತ್ಯೇಕ ಧರ್ಮದ ವಿಚಾರವಾಗಿ ಹೇಳಿಕೆ ಕೊಟ್ಟಿದ್ದರು. ಈ ಬಗ್ಗೆ ರಾಜ್ಯ ನಾಯಕರು ಹೈಕಮಾಂಡ್ಗೆ ಮಾಹಿತಿ ನೀಡಿದ್ದರು. ಸಿದ್ದರಾಮಯ್ಯ ಐದು ವರ್ಷ ಯಶಸ್ವಿಯಾಗಿ ಸರ್ಕಾರ ನಡೆಸಿದ್ದರೂ ಸಹ ಸೋಲುವುದಕ್ಕೆ ಕಾರಣವಾಗಿದ್ದೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ. ಹೀಗಾಗಿ, ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿ ಎಂದು ಕೆಲ ನಾಯಕರು ಮನವಿ ಮಾಡಿದ್ದರು.