ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಕಾಶ್ಮೀರವನ್ನು ತಲುಪಿದ್ದು, ಇದುವರೆಗೂ ಸುಮಾರು 3900 ಕಿ.ಮೀ ದೂರ ಈ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರಿನಾಟೆ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾತ್ರೆ ತನ್ನ ಅಂತಿಮ ಘಟ್ಟ ತಲುಪಿದ್ದು, ಈ ಯಾತ್ರೆ ಸಮಾಜದಲ್ಲಿನ ಕೋಮು ಸೌಹಾರ್ದತೆ ಕಾಪಾಡುವುದು, ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆ ವಿಚಾರವಾಗಿ ಧ್ವನಿ ಎತ್ತುವ ಉದ್ದೇಶ ಪೂರ್ಣಗೊಳಿಸಿದೆ. ಬಿಜೆಪಿ ಸರ್ಕಾರ ಬಡತನ, ನಿರುದ್ಯೋಗ ವಿಚಾರವಾಗಿ ಮಾತನಾಡಲು ತಯಾರಿಲ್ಲ. ಹೀಗಾಗಿ ಈ ವಿಚಾರಗಳ ಬಗ್ಗೆ ಧ್ವನಿ ಎತ್ತಲು ಕಾಂಗ್ರೆಸ್ ಪಕ್ಷ ಈ ಯಾತ್ರೆ ನಡೆಸಿದೆ.
ಈ ಯಾತ್ರೆಯಲ್ಲಿ ಶ್ರೀಮಂತರು, ಬಡವರು, ಜಾತಿ, ಧರ್ಮ, ಭಾಷೆ, ಲಿಂಗ ತಾರತಮ್ಯ ಇಲ್ಲದೇ ನಡೆದಿದೆ. ಒಟ್ಟು 12 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯಾತ್ರೆ ಸಾಗಿದೆ ಎಂದರು. ಮಹಾತ್ಮಾ ಗಾಂಧಿ ಅವರು ಪುಣ್ಯ ಸ್ಮರಣೆ ದಿನದಂದು ನಾವು ಈ ಯಾತ್ರೆ ಮುಕ್ತಾಯ ಮಾಡುತ್ತಿದ್ದೇವೆ. ಇದಾದ ನಂತರ ಈ ಯಾತ್ರೆಯ ಸಂದೇಶಗಳಾದ ಭ್ರಾತೃತ್ವ, ಪ್ರೀತಿ, ಶಾಂತಿ, ನಿರುದ್ಯೋಗದ ವಿರುದ್ಧ ಭಾರತ, ಬಡತನದ ವಿರುದ್ಧ ಭಾರತ ವಿಚಾರಗಳನ್ನು ಜನರಿಗೆ ತಲುಪಿಸಲು ಕೈ ಜತೆ ಕೈ ಜೋಡಿಸಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮ ನಾಳೆಯಿಂದ ಆರಂಭವಾಗಲಿದ್ದು, ಮಾರ್ಚ್ 26ರವರೆಗೆ ಸಾಗಲಿದೆ ಎಂದರು.
ಈ ದೇಶದ 6 ಲಕ್ಷ ಹಳ್ಳಿಗಳು, 10 ಲಕ್ಷ ಮತಗಟ್ಟೆಗಳನ್ನು ಕೈ ಜತೆ ಕೈ ಜೋಡಿಸ ಕಾರ್ಯಕ್ರಮ ಮೂಲಕ ತಲುಪಿಸಲಾಗುವುದು. ನಿರುದ್ಯೋಗದಿಂದ ಯುವಕರು ತತ್ತರಿಸಿದ್ದಾರೆ. ಬೆಲೆ ಏರಿಕೆ ಪರಿಣಾಮ ಪ್ರತಿಯೊಬ್ಬ ಮಧ್ಯಮ ವರ್ಗ ಹಾಗೂ ಬಡವರು ಪರದಾಡುತ್ತಿದ್ದಾರೆ.
ಮೋದಿ ಸರ್ಕಾರ ಕಾರ್ಯಕ್ರಮ ನೀಡಿಲ್ಲ:ಮೋದಿ ಸರ್ಕಾರ ಮಧ್ಯಮ ವರ್ಗ, ಬಡವರು, ದಿನಗೂಲಿ ಕಾರ್ಮಿಕರ ಬದುಕಿಗೆ ಯಾವುದೇ ನೀತಿ, ಕಾರ್ಯಕ್ರಮ ನೀಡಿಲ್ಲ. ಈ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಶೇ.5ರಷ್ಟು ತೆರಿಗೆ ವಿನಾಯಿತಿ ನೀಡಿದರೆ, ಬಡವರು ಬಳಸುವ ಮೊಸರು, ಹಿಟ್ಟಿನ ಮೇಲೆ ಜಿಎಸ್ಟಿ ಹಾಕಲಾಗಿದೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ. ಕಳೆದ 8.5 ವರ್ಷಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 1.64 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ¼ ಭಾಗದಷ್ಟು ಜನ ದಿನಗೂಲಿ ಕಾರ್ಮಿಕರಾಗಿದ್ದಾರೆ. ಇನ್ನು ಕೈ ಜತೆ ಕೈ ಜೋಡಿಸಿ ಕಾರ್ಯಕ್ರಮದಲ್ಲಿ ಭಾರತದ ಗಡಿಯೊಳಗೆ ಚೀನಾ ಅತಿಕ್ರಮಣದ ವಿಚಾರವನ್ನು ನಾವು ಜನರಿಗೆ ತಿಳಿಸುತ್ತಿದ್ದೇವೆ.
ಇಂದಿನ ವರದಿ ಪ್ರಕಾರ ಲಡಾಕ್ ಪ್ರದೇಶದಲ್ಲಿ ನಮ್ಮ 65 ಗಸ್ತು ಕೇಂದ್ರಗಳ ಪೈಕಿ 26 ಗಸ್ತು ಕೇಂದ್ರಗಳ ಮೇಲೆ ಭಾರತ ನಿಯಂತ್ರಣ ಕಳೆದುಕೊಂಡಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರು ದೇಶದ ಮೇಲೆ ಯಾರ ಅತಿಕ್ರಮಣವೂ ಆಗಿಲ್ಲ ಎಂದು ಹೇಳುತ್ತಾರೆ ಎಂದು ವಿವರಿಸಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದೆ. ಆದರೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಕಿತ್ತಾಟ ನಡೆಸುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ಯಾಕೆ ಬಗೆಹರಿಸುತ್ತಿಲ್ಲ? ಅಸ್ಸೋಂ ಹಾಗೂ ಮಿಜೋರಾಮ್ ರಾಜ್ಯಗಳು ಪರಸ್ಪರ ಕಿತ್ತಾಡುತ್ತಿವೆ. ಈ ಎಲ್ಲ ವಿಚಾರವಾಗಿ ಕೈ ಜತೆ ಕೈ ಜೋಡಿಸಿ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿಸಲಾಗುವುದು.
ಇನ್ನು ಜ.30ರಂದು ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಶ್ಮೀರ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲೂ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಸುಧಾಕರ್ ಚಾಲೆಂಜ್ನಿಂದ ಇಡೀ ಕಾಂಗ್ರೆಸ್ ನಲುಗಿದೆ : ಸಿಎಂ ಬೊಮ್ಮಾಯಿ ತಿರುಗೇಟು