ಬೆಂಗಳೂರು :ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಸೋಮವಾರ ರಾತ್ರಿ ಸಚಿವರ ಜೊತೆ ಸಭೆ ನಡೆಸಿದರು. ಈ ವೇಳೆ ಡಿಸಿಎಂ ಹುದ್ದೆ ಸೃಷ್ಟಿಯ ಬಗ್ಗೆಯೂ ಕೆಲ ಸಚಿವರು ವಿಷಯ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಚರ್ಚಿಸಲು ಬೆಂಗಳೂರಿಗೆ ಆಗಮಿಸಿರುವ ಸುರ್ಜೇವಾಲ ಅವರನ್ನು ಖಾಸಗಿ ಹೋಟೆಲ್ನಲ್ಲಿ ಕೆಲ ಸಚಿವರು ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆಯೂ ಸಮಾಲೋಚನೆ ನಡೆಯಿತು. ಸಚಿವರಾದ ಹೆಚ್ ಸಿ ಮಹದೇವಪ್ಪ, ಕೆ ಹೆಚ್ ಮುನಿಯಪ್ಪ, ಸತೀಶ್ ಜಾರಕಿಹೊಳಿ, ಕೆ ಎನ್ ರಾಜಣ್ಣ ವಿಷಯ ಪ್ರಸ್ತಾಪಿಸಿದ್ದಾರೆ.
ಲೋಕಸಭೆ ಚುನಾವಣೆ ಸಂಬಂಧ ಸಮುದಾಯವಾರು ಮೂರು ಡಿಸಿಎಂ ಹುದ್ದೆ ಸೃಷ್ಟಿಗೆ ಸಚಿವರು ಮನವಿ ಮಾಡಿದರು. ಲೋಕಸಭೆ ಚುನಾವಣೆಯಲ್ಲಿ ಇದರಿಂದ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗಲಿದೆ. ಬಿಜೆಪಿಯು ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಸಮುದಾಯವಾರು ಡಿಸಿಎಂ ಹುದ್ದೆ ನೀಡಿದೆ. ಅದೇ ರೀತಿ ರಾಜ್ಯದಲ್ಲೂ ಮೂರು ಡಿಸಿಎಂ ಹುದ್ದೆ ನೀಡಿದರೆ ಲಾಭವಾಗಲಿದೆ ಎಂದು ಸುರ್ಜೇವಾಲ ಅವರ ಮುಂದೆ ಬೇಡಿಕೆ ಇಟ್ಟಿದ್ದಾರೆ.