ಬೆಂಗಳೂರು/ಚೆನ್ನೈ:ರಾಜ್ಯ ವಿಧಾನಸಭೆ ಚುನಾವಣೆ ರಂಗೇರಿದೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ಗೆ ನೆರೆರಾಜ್ಯ ತೆಲಂಗಾಣದ ಸಿಎಂ ಕೆ ಚಂದ್ರಶೇಖರ್ರಾವ್ ನೇತೃತ್ವದ ಬಿಆರ್ಎಸ್ ಪಕ್ಷ ಬೆಂಬಲ ಘೋಷಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗುತ್ತಿವೆ ಎಂಬುದರ ನಡುವೆ ಶಾಕಿಂಗ್ ಸುದ್ದಿ ಬಂದಿದೆ.
ರಾಜಧಾನಿಯ ಮತ್ತೊಂದು ಕ್ಷೇತ್ರವಾದ ಪುಲಕೇಶಿನಗರದಲ್ಲಿ ಎಐಎಡಿಎಂಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದೆ. ಇದು ಬಿಜೆಪಿಗೆ ಅಚ್ಚರಿಯ ಸಂಗತಿಯಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸಾಮಿ ಅವರು ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಡಿ.ಅನ್ಬರಸನ್ ಅವರನ್ನು ಪುಲಕೇಶಿನಗರ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಇಳಿಸುವುದಾಗಿ ತಿಳಿಸಿದ್ದಾರೆ.
ತಮಿಳಗರೇ ಹೆಚ್ಚಿರುವ ಕ್ಷೇತ್ರ:ಪುಲಿಕೇಶಿ ನಗರ ಕ್ಷೇತ್ರ ಬೆಂಗಳೂರಿಗೆ ಸಮೀಪದಲ್ಲಿದೆ. ಈ ಹಿಂದೆ ಇದು ಯಲಹಂಕ ಕ್ಷೇತ್ರದ ಭಾಗವಾಗಿತ್ತು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಪ್ರತ್ಯೇಕ ಕ್ಷೇತ್ರವಾಯಿತು. ಕ್ಷೇತ್ರದಲ್ಲಿ ತಮಿಳು ಭಾಷಿಕ ಮತಗಳೇ ಹೆಚ್ಚಿವೆ ಎಂಬುದು ಗಮನಾರ್ಹ ಸಂಗತಿ. ಅಂದಾಜಿನ ಪ್ರಕಾರ ಇಲ್ಲಿ 68,000 ಕನ್ನಡೇತರ ಮತದಾರರು ಇದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಹಣೆಬರಹ ಪರೀಕ್ಷೆಗೆ ಇಳಿದಿರುವ ಎಐಎಡಿಎಂಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದರೂ ಕ್ಷೇತ್ರದಲ್ಲಿ ಮುಸ್ಲಿಂ ಮತಗಳೇ ಇಲ್ಲಿ ನಿರ್ಣಾಯಕವಾಗಿವೆ.
ಇನ್ನೂ, ಆಡಳಿತಾರೂಢ ಬಿಜೆಪಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಮುರಳಿ ಎಂಬುವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಪಕ್ಷ ಇನ್ನೂ ಅಭ್ಯರ್ಥಿಯನ್ನು ಅಖೈರು ಮಾಡಿಲ್ಲ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ಎಐಎಡಿಎಂಕೆ ಮಾತ್ರ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.