ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಯ ಫಲವಾಗಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಆರಂಭಗೊಂಡಿದ್ದು, ಸಿರಿಧಾನ್ಯ ಉತ್ಪಾದನೆ, ಜೇನು ಕೃಷಿ, ಬೀಜೋಪಚಾರ, ಖುಷ್ಕಿ ಬೇಸಾಯ ಹಾಗು ಕೋಯ್ಲೋತ್ತರ ಚಟುವಟಿಕೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ದೇಸಿ ಸಮ್ಮೇಳನದಲ್ಲಿ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ರೈತಾಪಿ ಸಮುದಾಯವನ್ನು ಆಕರ್ಷಿಸಿತು. ಯುವ ಸಮೂಹವೇ ಇದ್ದ ದೇಸಿ ಸಮ್ಮೇಳನದಲ್ಲಿ ಕೃಷಿ ಪರಿಕರ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.
ನಗರದ ಜಿಕೆವಿಕೆಯಲ್ಲಿ ಕೃಷಿ ವಿಸ್ತರಣಾ ಸೇವೆಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಡಿಪ್ಲೋಮಾ ಕೋರ್ಸ್ ಸಮ್ಮೇಳನ ನಡೆಯಿತು. ಇದು ದಕ್ಷಿಣ ಕರ್ನಾಟಕದ 16 ಜಿಲ್ಲೆಗಳ ಕೃಷಿ ಪರಿಕರ ಮಾರಾಟಗಾರರಿಗೆ ಒಂದು ವೇದಿಕೆಯನ್ನು ಕಲ್ಪಿಸಿತು. ಅಂದಾಜು 1,000ಕ್ಕೂ ಹೆಚ್ಚಿನ ಕೃಷಿ ಪರಿಕರ ಉದ್ದಿಮೆದಾರರು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ವಸ್ತುಪ್ರದರ್ಶನ, ವಿಚಾರ ವಿನಿಮಯ, ವಿಸ್ತರಣಾ ಕಾರ್ಯಕರ್ತರ ಯಶೋಗಾಥೆಗಳು ನಡೆದವು.
ಸಮ್ಮೇಳನದಲ್ಲಿ ಕೃಷಿ ವಸ್ತುಪ್ರದರ್ಶನ : ಜನರು ವಸ್ತು ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜಿತ ಬೀಜ( ಬೆಳೆಗಳು) ಕುರಿತು ಪ್ರದರ್ಶನದ ಮೂಲಕ ಮಾಹಿತಿ ನೀಡಲಾಯಿತು. ಜೈವಿಕ ಗೊಬ್ಬರ ಬೀಜೋಪಚಾರ ಯಾವ ರೀತಿ ನಡೆಸಬೇಕು, ಎಷ್ಟು ದ್ರಾವಣಕ್ಕೆ ಎಷ್ಟು ಗೊಬ್ಬರವನ್ನು ಹಾಕಿ ಮಿಶ್ರಣ ಮಾಡಬೇಕು, ಒಂದು ಎಕರೆಗೆ ಎಷ್ಟು ಮಿಶ್ರಣ ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಯಿತು. ಕೃಷಿಕರಿಗೆ ಕೃಷಿಯಲ್ಲಿ ಇರಬೇಕಾದ ಅಗತ್ಯ ಮಾಹಿತಿಗಳ ಜಾಗೃತಿ ಮೂಡಿಸಲಾಯಿತು. ಇದರ ಜೊತೆಯಲ್ಲಿ ಬೀಜಕ್ಕೆ ಎಣ್ಣೆಯ ಲೇಪನ ಮಾಡುವ ವಿಧಾನದ ಬಗ್ಗೆಯೂ ಮಾಹಿತಿ ನೀಡಲಾಯಿತು. ದ್ವಿದಳ ಧಾನ್ಯದ ಬೀಜವನ್ನು ಸುರಕ್ಷಿತ ತೇವಾಂಶದಲ್ಲಿ ಯಾವ ರೀತಿ ಇರಿಸಬೇಕು ಎನ್ನುವ ವಿವರಣೆಯನ್ನು ವಸ್ತುಪ್ರದರ್ಶನದಲ್ಲಿ ನೀಡಲಾಯಿತು. ನಂತರ ಬೀಜವರ್ಣ ಲೇಖನದ ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಯಿತು.
ದಿಢೀರ್ ತೇವಾಂಶ ಪರೀಕ್ಷೆ ವಿಧಾನಗಳನ್ನು ತಿಳಿಸುವ ಮಳಿಗೆಯಲ್ಲಿ ಯಾವ ಲವಣವನ್ನು ಉಪಯೋಗ ಮಾಡಬೇಕು, ಎಷ್ಟು ದ್ರಾವಣವನ್ನು ತಯಾರು ಮಾಡಬೇಕು, ಪರೀಕ್ಷೆ ಮಾಡುವ ಬೀಜಗಳನ್ನು ಎಷ್ಟು ಸಮಯ ನೀರಿನಲ್ಲಿ ನೆನೆಸಿ ಇಡಬೇಕು ಎನ್ನುವುದು ಸೇರಿದಂತೆ ಇಡೀ ವಿಧಾನದ ವಿವರಣೆ ನೀಡಲಾಗಿತ್ತು. ಹೀಗೆ ಬಂದ ಕೃಷಿ ಪರಿಕರ ಮಾರಾಟಗಾರರಿಗೆ ಇದರ ವಿವರ ನೀಡಲಾಯಿತು. ಸಾವಯವ ತರಕಾರಿಗಳು ಮತ್ತು ಹಣ್ಣುಗಳ ಪ್ರದರ್ಶಿಸಿ ಇವುಗಳ ಉಪಯೋಗದ ಬಗ್ಗೆಯೂ ಅಗತ್ಯ ಮಾಹಿತಿ ನೀಡಲಾಯಿತು. ಇವೆಲ್ಲವನ್ನೂ ರೈತರಿಗೆ ತಲುಪಿಸುವಂತೆ ಕೃಷಿ ಪರಿಕರ ಮಾರಾಟಗಾರರಿಗೆ ತಿಳುವಳಿಕೆ ಮೂಡಿಸಲಾಯಿತು.