ಬೆಂಗಳೂರು : ರಾಜ್ಯದಲ್ಲಿ ಮಳೆಯ ಕೊರತೆ ಹೆಚ್ಚಾಗಿದ್ದು, ಶೇ.79ರಷ್ಟು ಮಾತ್ರ ಬೆಳೆಯಾಗಿದೆ. ಈ ಬಗ್ಗೆ ಬೆಳಗ್ಗೆಯಿಂದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ತೀವ್ರ ಬರಪೀಡಿತ ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಬೆಳೆ ಪರಿಸ್ಥಿತಿ ಸಮೀಕ್ಷೆ ಮಾಡಲಾಗುತ್ತಿದೆ. 100ಕ್ಕೂ ಹೆಚ್ಚು ತಾಲುಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಚಿಂತನೆ ಇದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಹಾಗೂ ಹೊಸ ಘೋಷಣೆಗಳ ಅನುಷ್ಠಾನ ಕುರಿತು ಸಚಿವರು ಸಭೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ, ಶೇ. 79 ರಷ್ಟು ಬೆಳೆಯಾದರೂ, ಗೊಬ್ಬರ, ಬೀಜದ ಸಮಸ್ಯೆ ಬರದಂತೆ ನೋಡಿಕೊಂಡಿದ್ದೇವೆ. ಬೆಳೆಯ ಫಲ ರೈತರಿಗೆ ಸಿಗುವ ಅವಕಾಶವಿಲ್ಲ. ಇದೊಂದು ನೋವಿನ ಸಂಗತಿ. ಕೆಲವು ಕಡೆ ಬೆಳೆ ಒಣಗುತ್ತಿದೆ. ಕೆಲವು ಕಡೆ ತೇವಾಂಶ ಕಡಿಮೆಯಾಗ್ತಿದೆ. ಕೃಷಿ ಹೊಂಡಗಳಿರುವ ಕಡೆ ಬೆಳೆ ರಕ್ಷಿಸಿಕೊಳ್ಳಬಹುದು. ವಾರದೊಳಗೆ ಮಳೆ ಬಂದರೆ ಅರ್ಧ ಫಸಲು ಬರಬಹುದು. ಆದರೆ ಅಂತಹ ವಾತಾವರಣ ಕಾಣಿಸುತ್ತಿಲ್ಲ. ಹಾಗಾಗಿ ಗಂಭೀರವಾಗಿ ನಾವು ತೆಗೆದುಕೊಂಡಿದ್ದೇವೆ ಎಂದರು.
ಬೆಳೆಗಳ ಕೊರತೆ ಎಷ್ಟು?: ರಾಜ್ಯದಲ್ಲಿ ಭತ್ತ 4 ಲಕ್ಷ ಹೆಕ್ಟೇರ್ ಕೊರತೆಯಿದೆ. 3.5 ಲಕ್ಷ ಹೆಕ್ಟೇರ್ ರಾಗಿ ಕೊರತೆ ಕಂಡುಬಂದಿದೆ. 1.8 ಲಕ್ಷ ಹೆಕ್ಟೇರ್ ತೊಗರಿ ಕೊರತೆ ಇದೆ. ಇನ್ನು ಹತ್ತಿ 1.43 ಲಕ್ಷ ಹೆಕ್ಟೇರ್ ಕೊರತೆ ಇದೆ. ಭತ್ತ ಮತ್ತು ರಾಗಿ ಹಾಕಲು ನಮಗೆ ಇನ್ನೂ ಕಾಲಾವಕಾಶವಿದೆ. ಆದರೆ, ತೊಗರಿ ಹಾಗೂ ಬೇರೆ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ.
ಈ ವರ್ಷ 16 ಲಕ್ಷ ರೈತರು ವಿಮೆಗೆ ನೋಂದಣಿ ಮಾಡಿದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ 35 ಕೋಟಿ ರೂ. ಪರಿಹಾರ ಕೊಡಿಸಿದ್ದು, ಬೆಳೆ ಹಾಕಿದ್ದಾರೆ. ಅದು ನಾಶವಾಗಿದೆ. ತುಮಕೂರು, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ನಷ್ಟವಾಗಿದೆ. ಮಳೆ ಬಂದರೂ ಬೆಳೆ ಬರುವುದಿಲ್ಲವೆಂದು 194 ಪಂಚಾಯಿತಿಗಳಲ್ಲಿ ವಿಮೆ ಕೊಟ್ಟಿದ್ದೇವೆ. ಈ ಬಾರಿ ವಿಮೆ ನೋಂದಣಿ ಪ್ರಾರಂಭ ತಡವಾದ ಕಾರಣ ಹಾಗೂ ಮಳೆ ಇಲ್ಲದೆ ಬಿತ್ತನೆ ವಿಳಂಬವಾದ ಕಾರಣ ವಿಮೆ ನೋಂದಣಿ ಕಡಿಮೆಯಾಗಿದೆ. ಅದರೆ ಎಲ್ಲಾ ನೋಂದಾಯಿತ ರೈತರಿಗೆ ವಿಮೆ ಕ್ಲೈಮ್ ಸಿಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
139 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಕಂಡುಬಂದಿದೆ. ಕೇಂದ್ರದ ಮಾನದಂಡದ ಪ್ರಕಾರ ಡ್ರಾಟ್ ಡಿಕ್ಲೇರ್ ಮಾಡಿಲ್ಲ. ಮತ್ತೆ ಅವರು ಪರಿಶೀಲನೆ ಮಾಡಬೇಕೆಂಬ ನಿಯಮವಿದೆ. ಒಂದು ತಾಲೂಕಿನಲ್ಲಿ ಹತ್ತು ಗ್ರಾಮಗಳಿಗೆ ತೆರಳಿ ಪರಿಶೀಲನೆ ನಡೆಸಬೇಕು. ಆಗಸ್ಟ್ ಅಂತ್ಯದ ವೇಳೆಗೆ ಅವರು ವರದಿ ನೀಡಬೇಕು. ಅದನ್ನು ಸಬ್ ಕಮಿಟಿಯಲ್ಲಿ ಚರ್ಚೆ ಮಾಡುತ್ತೇವೆ. ನಂತರ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತೇವೆ. ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ಪ್ರತಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ವಾಸ್ತವ ಮಾಹಿತಿ ನೀಡ್ತಾರೆ. ನಾನು ಜಿಲ್ಲಾವಾರು ಭೇಟಿಗೆ ನಿರ್ಧರಿಸಿದ್ದು, ಮೊದಲು ಚಿತ್ರದುರ್ಗಕ್ಕೆ ಭೇಟಿ ನೀಡುತ್ತೇನೆ ಎಂದು ಮಾಹಿತಿ ನೀಡಿದರು.