ಕರ್ನಾಟಕ

karnataka

ETV Bharat / state

ಲಂಚದ ಆರೋಪ ಕುರಿತು ರಾಜ್ಯಪಾಲರಿಗೆ ದೂರು.. ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ

ತಮ್ಮ ಮೇಲೆ ಕೇಳಿ ಬಂದ ಲಂಚದ ಆರೋಪಕ್ಕೆ ಸಂಬಂಧಪಟ್ಟಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ
ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ

By

Published : Aug 7, 2023, 3:06 PM IST

Updated : Aug 7, 2023, 4:53 PM IST

ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ

ಮಂಡ್ಯ/ಬೆಂಗಳೂರು: ಕೃಷಿ ಸಚಿವರು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳೇ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಅಧಿಕಾರಿಗಳೆಂದು ಬಿಂಬಿಸಿ ರಾಜ್ಯಪಾಲರಿಗೆ ನೀಡಿರುವ ದೂರು ಪಿತೂರಿ ಸ್ವರೂಪದಲ್ಲಿದ್ದು, ನಕಲಿ ವ್ಯಕ್ತಿಗಳು ಮಾಡಿರುವ ಯೋಜಿತ ಸಂಚಾಗಿದೆ ಎಂದು ಕಿಡಿಕಾರಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಮಂಡ್ಯ ಜಿಲ್ಲೆಯ ಏಳು ಕೃಷಿ ಅಧಿಕಾರಿಗಳಿಂದ ದೂರು ಅರ್ಜಿ ಬಂದಿದ್ದು, ಈ ಬಗ್ಗೆ ನಿಯಮಾನುಸಾರ ಪರಿಶೀಲನೆ ನಡೆಸಿ, ಕ್ರಮ ವಹಿಸಬೇಕೆಂದು ಕೋರುವುದಾಗಿ ರಾಜ್ಯಪಾಲರ ಕಚೇರಿಯಿಂದ ಮುಖ್ಯಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ''ತಲಾ 6 ರಿಂದ 8 ಲಕ್ಷ ರೂಪಾಯಿ ಬೇಡಿಕೆ ಇಡಲಾಗಿದೆ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಲಂಚ ಕೇಳುವ ಇಂತಹ ಪದ್ಧತಿಗೆ ಕಡಿವಾಣ ಹಾಕುವ ಸಂಬಂಧ ಕ್ರಮ ವಹಿಸದಿದ್ದಲ್ಲಿ, ಅಧಿಕಾರಿಗಳು ಕುಟುಂಬ ಸದಸ್ಯರ ಜೊತೆಗೆ ವಿಷಯ ಕುಡಿಯುವುದಾಗಿ ತಿಳಿಸಿರುವುದರಿಂದ ಈ ದೂರಿನ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ತಮ್ಮನ್ನು ಕೋರುವುದಾಗಿ'' ಮುಖ್ಯ ಕಾರ್ಯದರ್ಶಿ ಅವರಿಗೆ, ರಾಜ್ಯಪಾಲರ ಅಧೀನ ಕಾರ್ಯದರ್ಶಿ ಜೆ ಪ್ರದೀಪ್​ ಅವರು ಪತ್ರ ಬರೆದಿದ್ದಾರೆ.

ರಾಜ್ಯಪಾಲರ ಕಚೇರಿಯಿಂದ ಬರೆದಿರುವ ಪತ್ರ

ತಮ್ಮ ಮೇಲೆ ಬಂದಿರುವ ಲಂಚ ಆರೋಪ ಕುರಿತು ಸಚಿವ ಚಲುವರಾಯಸ್ವಾಮಿ ಮಾತನಾಡಿ, ಈ ಬಗ್ಗೆ ನನಗೆ ಯಾವ ಮಾಹಿತಿಯೂ ಗೊತ್ತಿಲ್ಲ. ತನಿಖೆಗೆ ನೀಡುವಂತೆ ಮುಖ್ಯಮಂತ್ರಿಗಳ ಬಳಿ ನಾನೂ ಕೂಡ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರನ್ನು ಕರೆದು ಈ ಬಗ್ಗೆ ಸ್ವತಃ ನಾನೇ ಮಾತನಾಡಿರುವೆ. ಪ್ರಾಥಮಿಕವಾಗಿ ತನಿಖೆ ಮಾಡುವಂತೆಯೂ ಹೇಳಿದ್ದೇನೆ. ಮುಖ್ಯಮಂತ್ರಿಗಳು ಕೂಡ ತಮ್ಮಲ್ಲಿರುವ ಅಧಿಕಾರವನ್ನು ಉಪಯೋಗಿಸಿ ಯಾವುದಾರೂ ತನಿಖೆಗೊಳಿಸುವಂತೆ ಹಾಗೂ ಪ್ರಕರಣಕ್ಕೆ ಕಾರಣರಾದವವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆಯೂ ಫೋನ್​ ಕರೆ ಮೂಲಕ ಮನವಿ ಮಾಡಿರುವೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಎಡಿ, ಜೆಡಿ ಹಾಗೂ ಇಡಿ ಅಧಿಕಾರಿಗಳ ಬಳಿ ಈ ವಿಷವನ್ನು ಪ್ರಸ್ತಾಪ ಮಾಡಿಲ್ಲ, ಚರ್ಚೆಯನ್ನೂ ಮಾಡಿಲ್ಲ. ನನ್ನ ಹೆಸರನ್ನು ಬಳಸಿ ನೀವು ಯಾರಾದರೂ ಈ ಬಗ್ಗೆ ಮಾತನಾಡಿದ್ದೀರಾ ಎಂದು ಸಹ ಅಧಿಕಾರಿಗಳನ್ನು ಕೇಳಿದ್ದೇನೆ. ಅವರು ಸಹ ಯಾರ ಜೊತೆಗೂ ಮಾತನಾಡಿಲ್ಲ ಎಂದಿದ್ದಾರೆ. ವಿನಾಕಾರಣ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ. ಎಸ್​ಪಿ ಅವರ ಬಳಿ ಚರ್ಚೆ ಮಾಡಿದಾಗ ಇದೊಂದು ಫೇಕ್​ (ನಕಲಿ) ಪತ್ರವೆಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದನ್ನು ಬರೆದವರು ಯಾರು ಅನ್ನೋದನ್ನು ಮೊದಲು ಪತ್ತೆ ಹಚ್ಚಬೇಕಿದೆ. ಮುಖ್ಯಮಂತ್ರಿಗಳು ಕೂಡ ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಹಾಗಾಗಿ ತನಿಖೆ ಮಾಡಿ ಅಂತ ಅವರ ಬಳಿ ಕೇಳಿಕೊಂಡಿದ್ದೇನೆ ಎಂದು ಸಚಿವರು ತಿಳಿಸಿದರು.

ಜೆಡಿ ಬಳಿ ಕೇಳಿದಾಗಲೂ ಇದೊಂದು ಫೇಕ್ ಲೆಟರ್ ಎಂದಿದ್ದಾರೆ. ಬಹಳ ಜನ ಹುಡುಕಿ ಹುಡುಕಿ ಗೊಂದಲ ಸೃಷ್ಟಿ ಮಾಡಲು ಕಾದಿದ್ದಾರೆ. ಆದರೂ ಈ ಬಗ್ಗೆ ಸತ್ಯಾಸತ್ಯತೆ ತಿಳಿದು ತನಿಖೆಗೆ ಸೂಚಿಸುತ್ತೇನೆ. ನಮ್ಮನ್ನು ವಿನಾಕಾರಣ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಇದರಲ್ಲಿ ಅವರಿಗೆ ಖುಷಿ ಸಿಗುತ್ತಿದೆ ಅನ್ನೋದಾದರೆ ಮಾಡಲಿ. ನಮ್ಮನ್ನು ಹೆಚ್ಚೆಚ್ಚು ಟಾರ್ಗೆಟ್ ಮಾಡುವುದರಿಂದ ಮತ್ತಷ್ಟು ಪ್ರಕಾಶಮಾನವಾಗುತ್ತೇವೆ. ಬೆಳಗ್ಗೆ ಎದ್ದು ತಿಂಡಿ, ಊಟ ಮಾಡದೇ ನನ್ನನ್ನು ಟಾರ್ಗೆಟ್ ಮಾಡುವುದೇ ಕೆಲವರಿಗೆ ಕೆಲಸವಾಗಿದೆ. ಅದಕ್ಕೆ ನನಗೆ ಬೇಜಾರಿಲ್ಲ, ನನ್ನ ಕೆಲಸ ನಾನು ಮಾಡುವೆ ಎನ್ನುವ ಮೂಲಕ ತಮ್ಮ ಮೇಲೆ ಕೇಳಿಬಂದಿರುವ ಲಂಚದ ಆರೋಪವನ್ನು ಸಾರಾ ಸಗಟಾಗಿ ಸಚಿವರು ತಳ್ಳಿಹಾಕಿದರು.

ಹುಸಿ ದೂರಿಗೆ ಸಚಿವರ ಸ್ಪಷ್ಟನೆ: ಕೃಷಿ ಇಲಾಖೆಯಲ್ಲಿ ವರ್ಗಾವಣೆಗೆ ಲಂಚಕ್ಕೆ ಒತ್ತಾಯಿಸಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಸಚಿವರು ಪತ್ರಿಕಾ ಹೇಳಿಕೆ ಕೂಡ ಬಿಡುಗಡೆ ಮಾಡಿದ್ದಾರೆ.

''ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡುತ್ತಲೇ ಬಂದಿದ್ದು, ಇದು ಹತಾಶಾ ಮನೋಭಾವವಾಗಿದೆ. ಈಗಾಗಲೇ ಈ‌ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ರಾಜ್ಯಪಾಲರಿಗೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರುಪತ್ರ ಸೃಷ್ಟಿ ಮಾಡಿ ಕಳಿಸಲಾಗಿದೆ. ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ತರುವ ಪ್ರಯತ್ನ ಮುಂದುವರೆದಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಹಾಗಾಗಿಯೇ ರಾಜ್ಯಪಾಲರಿಗೆ ನಕಲಿ ಪತ್ರ ಸೃಷ್ಟಿ ಮಾಡಿ ಸಲ್ಲಿಸಲಾಗಿದೆ. ಇದಕ್ಕೆ ಈಗಾಗಲೇ ಈ ಬಗ್ಗೆ ಉತ್ತರಿಸಲಾಗಿದೆ. ಆದರೂ ಇದು ಹುಸಿ ದೂರು ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ದೂರಿನ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ತನಿಖೆ ಮಾಡಿ ವರದಿ‌ ಪಡೆಯುವಂತೆ'' ಮುಖ್ಯಮಂತ್ರಿಗಳನ್ನು ಚಲುವರಾಯಸ್ವಾಮಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಂಡೀಪುರದಲ್ಲಿ ಪ್ರವಾಸಿಗರ ನಡುವೆ ಡಿಶುಂ - ಡಿಶುಂ.. ಟ್ವೀಟ್​ನಿಂದ ದಾಖಲಾಯ್ತು ಎಫ್​ಐಆರ್​

Last Updated : Aug 7, 2023, 4:53 PM IST

ABOUT THE AUTHOR

...view details