ಬೆಂಗಳೂರು : ತಾನೊಬ್ಬ ಸ್ವಾಭಿಮಾನಿ ರೈತ ಎಂದು ಎದೆಯುಬ್ಬಿಸಿ ಹೇಳುವಂತಹ 'ಸ್ವಾಭಿಮಾನಿ ರೈತ' ಹೆಸರಿನ ಗುರುತಿನ ಚೀಟಿಯನ್ನು ರೈತರಿಗೆ ನೀಡಲು ಕೃಷಿ ಇಲಾಖೆ ಸಜ್ಜಾಗಿದೆ.
ಕೃಷಿ ಸಚಿವ ಬಿ ಸಿ ಪಾಟೀಲ್ ತಮ್ಮ ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದಲೇ ನಾಳೆ ರೈತರಿಗೆ 'ಸ್ವಾಭಿಮಾನಿ ರೈತ' ಎನ್ನುವ ಗುರುತಿನ ಚೀಟಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ತಂತ್ರಾಂಶದಲ್ಲಿ ನೋಂದಾಯಿಸಲ್ಪಟ್ಟಿರುವ ರೈತರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ.
ಏನಿದು 'ಸ್ವಾಭಿಮಾನಿ ರೈತ'ಗುರುತಿನ? :ರಾಜ್ಯದ ಇ-ಆಡಳಿತ ಇಲಾಖೆಯು ಎನ್‌ಐಸಿ ಮೂಲಕ ರಾಜ್ಯದ ರೈತರ ವಿವರಗಳನ್ನು ದಾಖಲಿಸಲು FRUITS ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಪ್ರತಿಯೊಬ್ಬ ರೈತರಿಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆ ನೀಡುವುದು ನೋಂದಣಿಯ ಉದ್ದೇಶ. ಈ ಗುರುತಿನ ಸಂಖ್ಯೆಯ ಆಧಾರದಲ್ಲಿ ರೈತರು 'ಫ್ರೂಟ್ಸ್' ತಂತ್ರಾಂಶ ಬಳಸುವ ಎಲ್ಲ ಇಲಾಖೆಗಳ ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ.
ರೈತರು ಪಡೆಯುವ ಎಲ್ಲ ಇಲಾಖೆಗಳ ಸೌಲಭ್ಯಗಳು ಅವರ ಗುರುತಿನ ಸಂಖ್ಯೆ ಮೂಲಕ ದಾಖಲಾಗುತ್ತದೆ. ಈ ತಂತ್ರಾಂಶದಲ್ಲಿ ರೈತರ ನೋಂದಣಿಯು ಜೂನ್ 2018ರಿಂದ ಪ್ರಾರಂಭವಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗಳಲ್ಲಿ ರೈತರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲಾಗುತ್ತಿದೆ.
ನೋಂದಣಿಗಾಗಿ ರೈತರ ಗುರುತು, ವಿಳಾಸ, ಭೂ ಹಿಡುವಳಿ, ಆಧಾರ್ ಗುರುತಿನ ಸಂಖ್ಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಎಲ್ಲ ಮಾಹಿತಿಯನ್ವಯ ನೋಂದಣಿ ಸಂಖ್ಯೆ ಆಧಾರಿತ ಗುರುತಿನ ಚೀಟಿ ನೀಡಲು ಪ್ರಸ್ತಾಪಿಸಲಾಗಿದೆ.
ಈ ತಂತ್ರಾಂಶವನ್ನು ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಒಂದು ಬಾರಿ ಮಾತ್ರ ರೈತರ ನೋಂದಣಿ ಮಾಡಲು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಾಂಶದಲ್ಲಿ ಆಧಾರ್ ಕಾರ್ಡ್, ಪಹಣಿ (RTC), ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರ ಜಾತಿ ಪ್ರಮಾಣ ಪತ್ರ, ಬ್ಯಾಂಕ್ ವಿವರ, ಫೋಟೋ ಇತ್ಯಾದಿ ದಾಖಲಾತಿಗಳನ್ನು ಪರಿಶೀಲಿಸಿ ರೈತರ ನೋಂದಣಿ ಮಾಡಲಾಗುತ್ತದೆ. ರೈತರ ಹಿಡುವಳಿ ವಿವರವನ್ನು ಕಂದಾಯ ಇಲಾಖೆಯ 'ಭೂಮಿ' ತಂತ್ರಾಂಶದಿಂದ ಪಡೆಯಲಾಗುತ್ತದೆ.