ಬೆಂಗಳೂರು: ಸಮಸ್ತ ರೈತ ಬಂಧುಗಳಿಗೆ ರಾಷ್ಟ್ರೀಯ ರೈತ ದಿನದ ಶುಭಾಶಯ ಕೋರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಂದು ಮಾಜಿ ಪ್ರಧಾನಮಂತ್ರಿ ಚೌಧರಿ ಚರಣಸಿಂಗ್ ಅವರ ಜಯಂತಿಗೆ ಆ ಮಹಾನ್ ನೇತಾರರಿಗೆ ನನ್ನ ಭಾವಪೂರ್ಣ ನಮನಗಳು ಎಂದು ಟ್ವೀಟ್ ಮಾಡಿದ್ದಾರೆ.
ನಾನು ಸಾಲ ಮನ್ನಾ ಮಾಡಿದ ನಂತರ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದ ಅನ್ನದಾತರ ಪರಿಸ್ಥಿತಿ ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರಗಳ ಆಡಳಿತದಲ್ಲಿ ಮತ್ತೆ ಚಿಂತಾಜನಕ ಆಗಿದೆ. ವಿನಾಶಕಾರಿ ನೀತಿಗಳಿಂದ ಕೃಷಿ ಅವಸಾನದತ್ತ ಸಾಗಿದೆ. ಡಬಲ್ ಎಂಜಿನ್ ಸರ್ಕಾರದ ಕಾಲದಲ್ಲಿ ಮತ್ತೆ ರೈತರ ಆತ್ಮಹತ್ಯೆಗಳು ಆರಂಭವಾಗಿರುವುದು ಕಳವಳಕಾರಿ. ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದೆ ಅನ್ನದಾತ ಸದಾ ಆತಂಕದಲ್ಲೇ ಇದ್ದು, ಅದಕ್ಕೆ ಕಾರಣವಾದ ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನಡೆ ಅತ್ಯಂತ ಅಕ್ಷಮ್ಯ ಎಂದಿದ್ದಾರೆ.