ಬೆಂಗಳೂರು: ರಾಜ್ಯದಲ್ಲಿ 7.64 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಹಿರಿಯ ಅಧಿಕಾರಿಗಳು ಖುದ್ದು ನಿಗಾ ವಹಿಸಬೇಕು ಎಂದು ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕೃಷಿ ಇಲಾಖೆಯ ಆಯವ್ಯಯ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ವೇಳೆ, ರಾಜ್ಯದಲ್ಲಿ ಮೇ 31ರ ಮಾಹಿತಿಯಂತೆ 1.26 ಲಕ್ಷ ಮೆಟ್ರಿಕ್ ಟನ್ ಡಿಎಪಿ ಲಭ್ಯವಿದ್ದು, ಒಟ್ಟಾರೆ, 7.64 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ರಾಜ್ಯದ ಬೇಡಿಕೆ ಪೂರೈಸಲು ಯಾವುದೇ ಕೊರತೆ ಇಲ್ಲ. ಆದರೆ, ವ್ಯವಸ್ಥಿತವಾಗಿ ಅಗತ್ಯ ಆಧರಿಸಿ, ರಸಗೊಬ್ಬರ ಸಕಾಲದಲ್ಲಿ ಪೂರೈಸಲು ಹಿರಿಯ ಅಧಿಕಾರಿಗಳೇ ಮೇಲ್ವಿಚಾರಣೆ ನಡೆಸಿ, ಯಾವುದೇ ಕೃತಕ ಅಭಾವ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ನಕಲಿ ಬೀಜ ಪೂರೈಕೆ ವಿರುದ್ಧ ಕಠಿಣ ಕ್ರಮ:ಅಂತೆಯೇ ಬಿತ್ತನೆ ಬೀಜ ರಾಜ್ಯದಲ್ಲಿ 7.81 ಲಕ್ಷ ಕ್ವಿಂಟಾಲ್ನಷ್ಟು ಲಭ್ಯವಿದ್ದು, ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ಲಭ್ಯವಿದೆ. ಆದರೆ, ನಕಲಿ ಬೀಜಗಳ ಹಾವಳಿಯನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಈ ಕುರಿತು ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಬೇಕು. ನಕಲಿ ಬೀಜ ಪೂರೈಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 114.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರೊಂದಿಗೆ ಕಂದಾಯ ಇಲಾಖೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳಿಂದ, ಬಂಜರು ಭೂಮಿ ಹಾಗೂ ಸವಳು - ಜವಳು ಭೂಮಿಯ ಮಾಹಿತಿ ಪಡೆದು, ಈ ವರ್ಷ ಕನಿಷ್ಠ ತಲಾ ಒಂದು ಲಕ್ಷ ಹೆಕ್ಟೇರ್ನಷ್ಟು ಬಂಜರು ಭೂಮಿ ಹಾಗೂ ಸವಳು - ಜವಳು ಭೂಮಿಯನ್ನು ಕೃಷಿಯೋಗ್ಯವಾಗಿ ಪರಿವರ್ತಿಸುವಂತೆ ಸೂಚಿಸಿದರು.