ಬೆಂಗಳೂರು: ರೈತರ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆಯಾದರೂ, ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಕೃಷಿಯಲ್ಲಿ ಆಧುನಿಕತೆ ತರಲು ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ, ಬೀಜ, ಗೊಬ್ಬರ, ಖರೀದಿಗೆ ಪ್ರೋತ್ಸಾಹಧನ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ಇಲ್ಲಿದೆ.
ಇದೀಗ ಕೃಷಿಯಲ್ಲಿಯೂ ಆಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಕಡಿಮೆಯಾಗುತ್ತಿದ್ದರಿಂದ ಸರ್ಕಾರವು ರೈತರಿಗೆ ನೆರವು ನೀಡಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. 2021-22ನೇ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಆರಂಭಿಸಲಾಗಿದೆ. ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಅರ್ಹ ರೈತರಿಂದ ಅರ್ಜಿ ಆಹ್ವಾನ: ಯಂತ್ರಧಾರೆ ಕೇಂದ್ರಗಳನ್ನು ಹೋಬಳಿ ಪ್ರದೇಶದಲ್ಲಿ ಸ್ಥಾಪಿಸಲಾಗಿತ್ತು. ಇದರಿಂದಾಗಿ ಹೋಬಳಿ ವ್ಯಾಪ್ತಿಯಲ್ಲಿರುವ ಕೆಲವು ಗ್ರಾಮಗಳಿಗೆ ಮಾತ್ರ ಈ ಕೇಂದ್ರದ ಸೌಲಭ್ಯ ಸಿಗುತ್ತಿತ್ತು. ದೂರದ ಗ್ರಾಮಗಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳ ಸೌಲಭ್ಯ ಸಿಗುತ್ತಿರಲಿಲ್ಲ. ಹಾಗಾಗಿ ಈಗ ಗ್ರಾಮಗಳಲ್ಲಿಯೂ ಕೃಷಿ ಯಂತ್ರೋಪಕರಣಗಳ ಕೇಂದ್ರ ಸ್ಥಾಪಿಸಲು ಸರ್ಕಾರ ಮುಂದಾಗಿದೆ. 2021-22ನೇ ಸಾಲಿನಲ್ಲಿ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ Farm Mechanization Bank ಸ್ಥಾಪಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸ್ಥಳೀಯವಾಗಿ ಕೃಷಿ ಯಂತ್ರೋಪಕರಣಗಳ ತಯಾರಿಕೆ ಸೌಲಭ್ಯದೊಂದಿಗೆ ಕೃಷಿ ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಯುವ ರೈತರನ್ನು ಕೃಷಿಯಲ್ಲೇ ಉಳಿಸಿಕೊಳ್ಳುವಲ್ಲಿ ಅವರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ಉದ್ದೇಶದಿಂದ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕೃಷಿ ಯಂತ್ರೋಪಕರಣಗಳು, ಪಂಪ್ ಸೆಟ್ಗಳು, ಕೊಳವೆ ಬಾವಿಗಳು, ರಿಪೇರಿ ಮಾಡುವ, ಸೂಕ್ಷ್ಮ ನೀರಾವರಿ ಘಟಕಗಳ ದುರಸ್ಥಿ ಮಾಡುವ ಸೌಲಭ್ಯವನ್ನು ಗ್ರಾಮಗಳಲ್ಲಿಯೇ ನೀಡಲಾಗುತ್ತದೆ. ಈ ಕೇಂದ್ರಗಳನ್ನು ಬ್ಯಾಂಕ್ ಲೋನ್ ಆಧಾರದ ಮೇಲೆ ಒಂದು ಬಾರಿ ಸಹಾಯಧನ ನೀಡುವ ಮೂಲಕ ಗ್ರಾಮೀಣ ಕೃಷಿ ಯಂತ್ರೋಪಕರಣ ಕೇಂದ್ರ ಸ್ಥಾಪಿಸಿ ಮತ್ತು ಮುನ್ನೆಡಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅದೇ ರೀತಿ ರಾಜ್ಯದ ಇತರ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿಯೂ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ತಮ್ಮ ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಹತೆ ಏನು?: ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸುವುದಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರು ಆಯಾ ಗ್ರಾಮದ ನೋಂದಾಯಿತ ರೈತ ಸಹಕಾರಿ ಸೊಸೈಟಿಗಳ ಸದಸ್ಯರಾಗಿರಬೇಕು. ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿಓ) ಮತ್ತು ಗ್ರಾಮ ಪಂಚಾಯಿತಿಗಳು ಅರ್ಜಿ ಸಲ್ಲಿಸಬಹುದು. ಇದೇ ರೀತಿ ರಾಜ್ಯದ ಇತರ ಹೋಬಳಿ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿಯೂ ಕೃಷಿ ಯಂತ್ರೋಪಕರಣ ಸೇವಾ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನಿಸಲಾಗಿದೆ. ರೈತರು ತಮ್ಮ ಹತ್ತಿರದ ರೈತ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.