ಬೆಂಗಳೂರು: ಕೃಷಿ ಜಮೀನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿದ್ದಲ್ಲಿ ನಿಗದಿತ ಶುಲ್ಕ ಪಡೆದು ವಸತಿ ಉದ್ದೇಶಕ್ಕೆ ಬಳುಸವುದಕ್ಕಾಗಿ ಭೂ ಪರಿವರ್ತನೆಗೆ ಅನುಮತಿ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಧಾರವಾಡ ಜಿಲ್ಲೆಯಲ್ಲಿ ಶಬರಿ ನಗರದ ನಿವಾಸಿ ಜುನೈದ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಪೀಠ ಅರ್ಜಿ ಮಾನ್ಯಮಾಡಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95ರ ಪ್ರಕಾರ ಕೃಷಿ ಜಮೀನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿದ್ದರೆ, ಅಂತಹ ಜಮೀನನ್ನು ಯಾವ ಉದ್ದೇಶಕ್ಕೆ ಗೊತ್ತುಪಡಿಸಲಾಗಿದೆಯೋ, ಅದಕ್ಕಾಗಿ ಪರಿವರ್ತಿಸಲು ಕೋರಿದರೆ ದಂಡ ಪಾವತಿಯ ಷರತ್ತಿಗೆ ಒಳಪಟ್ಟು ಅನುಮತಿ ನೀಡಬೇಕಾಗುತ್ತದೆ.
ಆದ್ದರಿಂದ ಪ್ರಕರಣದಲ್ಲಿ ನಿಗದಿತ ಭೂ ಪರಿವರ್ತನೆ ಶುಲ್ಕ ಪಾವತಿಯ ಷರತ್ತಿಗೆ ಒಳಪಟ್ಟಂತೆ ಅರ್ಜಿದಾರ ಈ ಜಮೀನನ್ನು ವಸತಿ ಉದ್ದೇಶಕ್ಕೆ ಬಳಕೆ ಮಾಡಲು ಅರ್ಹನಾಗಿದ್ದೇನೆ ಎಂದು ಪೀಠ ತಿಳಿಸಿದೆ. ಪ್ರಕರಣದಲ್ಲಿ ಭೂ ಪರಿವರ್ತನೆಗೆ ಕೋರಿ ಅರ್ಜಿದಾರ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿಯು 2022ರ ಸೆ.3ರಂದು ನೀಡಿರುವ ಹಿಂಬರಹವನ್ನು ಹೈಕೋರ್ಟ್ ರದ್ದುಪಡಿಸಿದೆ.
ಜತೆಗೆ, ಅರ್ಜಿದಾರನಿಂದ ನಿಗದಿತ ಭೂ ಪರಿವರ್ತನೆ ಶುಲ್ಕವನ್ನು ಪಡೆದು ಅರ್ಜಿದಾರನಿಗೆ ಸೇರಿದ ಧಾರವಾಡ ಜಿಲ್ಲೆಯ ಛಬ್ಬಿ ಹೋಬಳಿಯ ರಾಯನಾಳ ಗ್ರಾಮದ ಸರ್ವೇ ನಂಬರ್ 82/18ರಲ್ಲಿನ ಸುಮಾರು ಎರಡೂವರೆ ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಅನುಮತಿ ನೀಡಬೇಕು. ಆ ಸಂಬಂಧ ಚಲನ್ ಅನ್ನು ಅರ್ಜಿದಾರರಿಗೆ ನೀಡಬೇಕು. ಒಂದೊಮ್ಮೆ ಅರ್ಜಿದಾರ ಭೂ ಪರಿವರ್ತನೆ ಶುಲ್ಕ ಪಾವತಿಸಿದರೆ, ಕಾನೂನು ಪ್ರಕಾರ ಈ ಜಾಗವನ್ನು ವಸತಿ ಉದ್ದೇಶಕ್ಕೆ ಬಳಸಲು ಅರ್ಹರಾಗುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಧಾರವಾಡ ಜಿಲ್ಲೆಯ ಛಬ್ಬಿ ಹೋಬಳಿಯ ರಾಯನಾಳ ಗ್ರಾಮದ ಸರ್ವೇ ನಂಬರ್ 82/18ರಲ್ಲಿನ ಸುಮಾರು ಎರಡೂವರೆ ಗುಂಟೆ ಜಾಗ ಜುನೈದ್ ಎಂಬುವವರಿಗೆ ಸೇರಿತ್ತು. ಅದು ಹುಬ್ಬಳಿ ನಗರ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದ ಮಾಸ್ಟರ್ ಪ್ಲಾನ್‌ನಲ್ಲಿ ವಸತಿ ಉದ್ದೇಶ ಬಳಕೆಗೆ ಗೊತ್ತುಪಡಿಸಲಾಗಿದೆ. ಆ ಎರಡೂವರೆ ಗುಂಟೆ ಜಾಗವನ್ನು ಭೂ ಪರಿವರ್ತನೆ ಮಾಡಲು ಅನುಮತಿ ನೀಡುವಂತೆ ಕೋರಿ ಅರ್ಜಿದಾರ ಜುನೈದ್, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 95ರಡಿ ಧಾರವಾಡ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.
ಆ ಮನವಿಯನ್ನು ತಿರಸ್ಕರಿಸಿದ್ದ ಜಿಲ್ಲಾಧಿಕಾರಿ, ಈ ಜಾಗದ ಪಕ್ಕದ ಭೂಮಿಯು ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ವಿಸ್ತರಣೆಗೆ ಅಧಿಸೂಚಿತವಾಗಿದೆ ಎಂದು ಹಿಂಬರಹ ನೀಡಿದ್ದರು. ಅದನ್ನು ಜುನೈದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ:ವಕೀಲ ಜಗದೀಶ್ ಗೆ 2 ಲಕ್ಷ ರೂ ದಂಡ : ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಹೈಕೋರ್ಟ್