ಬೆಂಗಳೂರು: ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡಲು ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಲಭ್ಯವಿರುವ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆ ಪಡೆಯುವುದು ಅತ್ಯಾವಶ್ಯಕವಾಗಿದೆ. ಇದಕ್ಕಾಗಿ, ಕೃಷಿ ಮತ್ತು ತೋಟಗಾರಿಕೆಯೊಂದಿಗೆ ಪೂರಕ ಉಪ ಕಸುಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ರೈತರು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಕೃಷಿ ವಲಯದ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು, ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವಶ್ಯವಿರುವ ತಂತ್ರಜ್ಞಾನವನ್ನು ತಲುಪಿಸಲು ಏಕಗವಾಕ್ಷಿ ವಿಸ್ತರಣಾ ಪದ್ಧತಿಯಲ್ಲಿ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದಕ್ಕಾಗಿ ವಿವಿಧ ಅಭಿವೃದ್ಧಿ ಇಲಾಖೆಗಳ ಸಮನ್ವಯದೊಂದಿಗೆ ಸಮೂಹ ಜಾಗೃತಿ ಕಾರ್ಯಕ್ರಮವಾದ 'ಕೃಷಿ ಅಭಿಯಾನ'ವನ್ನು ಸರ್ಕಾರ ರೂಪಿಸಿದೆ.
ಉದ್ದೇಶವೇನು?: ಕೃಷಿ ಹಾಗೂ ಬೇಸಾಯ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸುವುದು. ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ ಹಾಗೂ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಏರ್ಪಡಿಸುವುದು. ಕೃಷಿ ಅಭಿಯಾನ ಈ ಪ್ರಮುಖ ಘಟಕಗಳನ್ನೊಳಗೊಂಡಿರುತ್ತದೆ. ಅದರದಲ್ಲಿ ಸಮಗ್ರ ಕೃಷಿ ಮಾಹಿತಿ ಘಟಕ ಹಾಗೂ ರೈತ ಸಂವಾದ ಪ್ರಮುಖವಾಗಿದೆ. ಕೃಷಿ ಅಭಿಯಾನ ಈಗಾಗಲೇ ಅನುಷ್ಠಾನಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾಗವಹಿಸುವಿಕೆ:ಕೃಷಿ ಅಭಿಯಾನದ ಸಭೇಗಳಲ್ಲಿ ಕೃಷಿ ಮತ್ತು ಇತರೆ ಇಲಾಖಾ ಅಧಿಕಾರಿಗಳು-ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಸಹಕಾರ, ಕಂದಾಯ ಇಲಾಖೆಗಳು ಕಡ್ಡಾಯವಾಗಿ ಭಾಗವಹಿಸಬೇಕು. ಕೃಷಿ ವಿಶ್ವ ವಿದ್ಯಾಲಯಗಳ ವಿಜ್ಞಾನಿಗಳು, ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು, ರೈತರು, ಆತ್ಮ ಗುಂಪುಗಳು, ಸಾವಯವ ಕೃಷಿ ಸಂಘಗಳು, ಸ್ವಸಹಾಯ ಗುಂಪುಗಳು, ಸರ್ಕಾರೇತರ ಸಂಸ್ಥೆಗಳು ಭಾಗವಹಿಸಬೇಕು.
ರೈತರು ಎದುರಿಸುವ ಸಮಸ್ಯೆಗೆ ಪರಿಹಾರ ಸೂಚಿಸುವ ಸಲುವಾಗಿ ಗ್ರಾಮ ಲೆಕ್ಕಿಗರು, ಕಂದಾಯ ಇಲಾಖಾ ಸಿಬ್ಬಂದಿಯವರು ಕಡ್ಡಾಯವಾಗಿ ಭಾಗವಹಿಸಬೇಕು. ಸಾಲ ಸೌಲಭ್ಯ ನೀಡುವ ಸಂಸ್ಥೆಗಳು, ಬ್ಯಾಂಕ್ ಸಿಬ್ಬಂದಿ, ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿಮೆ ಸಂಸ್ಥೆಯ ಪ್ರತಿನಿಧಿಗಳು ಕಡ್ಡಾಯವಾಗಿ ಭಾಗವಹಿಸಬೇಕಾಗಿದೆ.
ಪ್ರಚಾರ ಕಾರ್ಯಕ್ರಮ: ಪ್ರತಿ ಹೋಬಳಿಯಲ್ಲಿ ಗ್ರಾಮ ಪಂಚಾಯತಿವಾರು ಕಾರ್ಯ ತಂಡವನ್ನು ರಚಿಸಿಕೊಂಡು, ಆಯಾ ಪಂಚಾಯಿತಿಗೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಎಲ್ಲಾ ಗ್ರಾಮ ಪಂಚಾಯತಿಗಳು ಒಳಗೊಂಡಂತೆ ಮೂರು ದಿನಗಳ ಕಾಲ ತೀವ್ರ ಪ್ರಚಾರ ಕಾರ್ಯದ ಜೊತೆಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ತಂಡಗಳು ಸ್ಥಳೀಯವಾಗಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸುವುದು. ಸದರಿ ಸಂವಾದ ಕಾರ್ಯಕ್ರಮದಲ್ಲಿ ರೈತರ ಸ್ಥಳೀಯ ಅವಶ್ಯಕತೆಗಳು ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಕೈಗೊಳ್ಳುವುದು ಹಾಗೂ ಅವುಗಳ ನಿವಾರಣೆಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವುದು.
ಅನುದಾನ: ಪ್ರತಿ ಹೋಬಳಿಗೆ 26,990 ರೂ. ನಿಗದಿಪಡಿಸಿರುವ ಅನುದಾನವನ್ನು ಉಪಯೋಗಿಸಿಕೊಳ್ಳುತ್ತಾ ಜಿಲ್ಲಾ ಪಂಚಾಯಿತಿ, ಇತರ ಇಲಾಖೆಗಳ ಕಾರ್ಯಕ್ರಮಗಳ ಅನುದಾನ ಹೊಂದಿಸಿಕೊಂಡು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು.
ಸಮಗ್ರ ಕೃಷಿ ಮಾಹಿತಿ ಘಟಕ:ಸಂಚಾರಿ ಕೃಷಿ ಮಾಹಿತಿ ಘಟಕವನ್ನು ಬಳಸಿಕೊಂಡು ಕೃಷಿ ಮತ್ತು ವಿವಿಧ ಇಲಾಖಾ ಅಧಿಕಾರಿಗಳು, ಪ್ರತಿ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಮೂರು ದಿನಗಳ ಕಾಲ ತೀವ್ರ ಪ್ರಚಾರ ಕೈಗೊಳ್ಳುವುದರ ಜೊತೆಗೆ ಸ್ಥಳೀಯವಾಗಿ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಏರ್ಪಡಿಸುವುದು.