ಕರ್ನಾಟಕ

karnataka

ETV Bharat / state

ಅಗ್ರಿ ವಾರ್ ರೂಮ್​ಗೆ  ನಿತ್ಯ  ರೈತರಿಂದ ಬರುತ್ತಿರುವ ಕರೆಗಳೆಷ್ಟು? - Agri war room working time

ರೈತರಿಗೆ ಲಾಕ್​ಡೌನ್ ನಿಂದ ಉಂಟಾದ ಸಮಸ್ಯೆಗಳ ಪರಿಹಾರಕ್ಕೆ ಬೆಳಗ್ಗೆ 8 ರಿಂದ ರಾತ್ರಿ‌ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ಕೃಷಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆರಂಭಿಸಿರುವ ಅಗ್ರಿ ವಾರ್ ರೂಮ್ ಕಳೆದ ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿದೆ.

Agri war room
ಅಗ್ರಿ ವಾರ್ ರೂಂ

By

Published : Apr 8, 2020, 10:58 PM IST

ಬೆಂಗಳೂರು: ಲಾಕ್​ಡೌನ್ ವೇಳೆ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಆರಂಭಿಸಲಾಗಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಬಹು ನಿರೀಕ್ಷೆಯ ಅಗ್ರಿ ವಾರ್ ರೂಂಗೆ ಪ್ರತಿ ದಿನ 350 ಕ್ಕೂ ಹೆಚ್ಚಿನ ಕರೆಗಳು ಬರುತ್ತಿದ್ದು ಸಮಸ್ಯೆಗಳಿಗೆ ರೈತರು ಪರಿಹಾರ ಕಂಡುಕೊಳ್ಳುತ್ತಿದ್ದಾರೆ.

ರಾಜ್ಯದ ರೈತರಿಗೆ ಲಾಕ್​ಡೌನ್ ನಿಂದ ಉಂಟಾದ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಪರಿಕರಗಳನ್ನು ಸಕಾಲದಲ್ಲಿ ರೈತರಿಗೆ ದೊರೆಯುವಂತೆ ಮಾಡಲು ಹಾಗೂ ವಿವಿಧ ಅಗತ್ಯ ವಸ್ತುಗಳ ಸಮರ್ಪಕ ವ್ಯವಸ್ಥೆಗಾಗಿ ಬೆಳಗ್ಗೆ 8 ರಿಂದ ರಾತ್ರಿ‌ 8 ಗಂಟೆಯವರೆಗೆ ಕಾರ್ಯನಿರ್ವಹಿಸಲು ಕೃಷಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆರಂಭಿಸಿರುವ ಅಗ್ರಿ ವಾರ್ ರೂಮ್ ಕಳೆದ ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿದೆ. ಕೃಷಿ, ತೋಟಗಾರಿಕೆ ಮತ್ತು ಸಹಕಾರ ಇಲಾಖೆಯ ಸಮನ್ವಯತೆಯಲ್ಲಿ ಅಗ್ರಿ ವಾರ್ ರೂಮ್ ಕಾರ್ಯನಿರ್ವಹಿಸುತ್ತಿದೆ. ಮಾರ್ಚ್ 31 ರಿಂದ ಇಲ್ಲಿಯವರೆಗೆ 3,250 ಕ್ಕೂ ಹೆಚ್ಚಿನ ಕರೆಗಳು ವಾರ್ ರೂಮ್ ಗೆ ಬಂದಿವೆ.

ಇದರಲ್ಲಿ ಬೆಳೆಗಳ ಸಾಗಣೆಗೆ, ಮಾರಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಎಪಿಎಂಸಿಗಳಿಗೆ ಉತ್ಪನ್ನಗಳ ಸಾಗಾಣಿಕೆಗೆ ಅಡ್ಡಿಯಾಗುತ್ತಿದೆ. ಚೆಕ್ ಪೋಸ್ಟ್ ಗಳಲ್ಲಿ ವಾಹನಗಳಿಗೆ‌ ತಡೆ ಒಡ್ಡಿ ಅಡಚಣೆ ಪಡಿಸಲಾಗುತ್ತಿದೆ. ಹಣ್ಣು, ತರಕಾರಿ ಸೇರಿ ಕೃಷಿ ಉತ್ಪನ್ನಗಳ ವಹಿವಾಟು ಸುಗಮವಾಗುವಂತೆ ರೈತರು ಸಹಾಯವಾಣಿಗೆ ಕರೆ ಮಾಡಿ ಮನವಿ ಮಾಡಿದ್ದಾರೆ. ಕೆಲವೊಂದು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಅಥವಾ ಮಾರಾಟ ಮಾಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಶಿಥಿಲೀಕರಣ ಘಟಕಗಳಲ್ಲಿ ಶೇಖರಣೆ ಮಾಡಲು ರೈತರಿಗೆ ಸಲಹೆ ನೀಡಲಾಗಿದ್ದು, ರಾಜ್ಯದಲ್ಲಿ 122 ಖಾಸಗಿ, 6 ಎಪಿಎಂಸಿ, ‌8 ಕಾಪೆಕ್ ಒಡೆತನದ ಸೇರಿದಂತೆ ಒಟ್ಟು 136 ಶಿಥಿಲೀಕರಣ ಘಟಕಗಳಿದ್ದು, 4,40,883 ಮೆಟ್ರಿಕ್ ಟನ್‌ ದಾಸ್ತಾನು ಮಾಡುವ ಸಾಮರ್ಥ್ಯವಿದ್ದು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.

ಕೇರಳ ಹೊರತುಪಡಿಸಿ ಅಂತಾರಾಜ್ಯ ಗಡಿಗಳಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಮುಕ್ತ ಅವಕಾಶವಿದೆ. ಇದಕ್ಕೆ ಸಮಸ್ಯೆಯಾಗಿದ್ದಲ್ಲಿ ಪರಿಶೀಲಿಸಿ ಕೃಷಿ ಇಲಾಖೆ ಉಪ ನಿರ್ದೇಶಕರ ಮೂಲಕ‌ ಜಿಲ್ಲಾಡಳಿತವನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸುವ ಆಶ್ವಾಸನೆಯನ್ನು ರೈತರಿಗೆ ನೀಡಲಾಗಿದೆ. ಇನ್ನು ಗ್ರೀನ್ ಪಾಸ್ ಸಮಸ್ಯೆ ಬಗ್ಗೆಯೂ‌ ಸಾಕಷ್ಟು ದೂರುಗಳು ಬಂದಿವೆ. ಬೇರೆ ಕಡೆಯಿಂದ ಗೊಬ್ಬರ, ಬೀಜ, ಕ್ರಿಮಿನಾಶಕ ತರಲು ಮಾರಾಟ ಮಾಡಲು ಕೃಷಿಗೆ ಪೂರಕವಾಗಿ ಚಟುವಟಿಕೆ ನಡೆಸುವರಿಗೆ ಸರಿಯಾಗಿ ಪಾಸ್ ನೀಡುತ್ತಿಲ್ಲ ಎನ್ನುವ ಕುರಿತು ತಕ್ಷಣವೇ ಗಮನ ಹರಿಸಲಾಗುತ್ತದೆ. ಈ ಸಂಬಂಧ ತಾಲೂಕು ಕೃಷಿ ‌ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡಲಿದ್ದು, ಅವರಿಂದ ಗ್ರೀನ್ ಪಾಸ್ ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ನೀಡಲಾಯಿತು.

ಸಹಾಯವಾಣಿ ಸಂಖ್ಯೆ: ಕೃಷಿ ಇಲಾಖೆಯಲ್ಲಿನ ಮುಖ್ಯ ಕಚೇರಿಯಲ್ಲಿನ ನಿಯಂತ್ರಣ ಕೊಠಡಿ ಸಂಖ್ಯೆಗಳು-08022211764 ಮತ್ತು 08022212818 ಸಂಖ್ಯೆಗಳಿಗೆ ರೈತರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ.

ಕರ್ತವ್ಯನಿರತ ಅಧಿಕಾರಿಗಳು:

1.ಸ್ಮಿತಾ -8.00 ರಿಂದ ಮಧ್ಯಾಹ್ನ 2.00 ರ ವರೆಗೆ

2.ವೀಣಾ -8.00 ರಿಂದ ಮಧ್ಯಾಹ್ನ 2.00 ರ ವರೆಗೆ

3.ರೇಮಗೌಡ- ಮಧ್ಯಾಹ್ನ 2.00 ರಿಂದ ರಾತ್ರಿ 8.00 ರ ವರೆಗೆ

4.ವಿಶ್ವನಾಥ್-ಮಧ್ಯಾಹ್ನ 2.00 ರಿಂದ ರಾತ್ರಿ 8.00 ರ ವರೆಗೆ ವಾರ್ ರೂಂ ನಲ್ಲಿ ಪ್ರತಿ ದಿನ ತಲಾ ಇಬ್ಬರು ಅಧಿಕಾರಿಗಳು‌ ಎರಡು ಪಾಳಿಯಲ್ಲಿ ಕೆಲಸ‌ ಮಾಡುತ್ತಿದ್ದಾರೆ.

ABOUT THE AUTHOR

...view details