ಬೆಂಗಳೂರು:ಡಾಟಾಕೇಂದ್ರಿತ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆಯ ಮೂಲಕ ನಗರದಲ್ಲಿ ಸಂಚಾರ ಸುರಕ್ಷತೆ ಹಾಗೂ ಸಂಚಾರ ದಟ್ಟಣೆಯನ್ನು ಸುಧಾರಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಹಾಗೂ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಡುವೆ ಒಡಂಬಡಿಕೆ ನಡೆದಿದೆ. ಅದರನ್ವಯ ನಗರದ ಸಂಚಾರ ವ್ಯವಸ್ಥೆಯ ಕುರಿತ ಡೇಟಾವನ್ನು ಇನ್ನು ಮುಂದೆ ಐಐಎಸ್‌ಸಿ ಸಂಶೋಧಕರು, ತಜ್ಞರೊಂದಿಗೆ ಬೆಂಗಳೂರು ಸಂಚಾರಿ ಪೊಲೀಸರು ಹಂಚಿಕೊಳ್ಳಲಿದ್ದಾರೆ.
''ಬೆಂಗಳೂರು ನಗರವು ಪ್ರತಿ ತಿಂಗಳು 30 ಪೆಟಾ ಬೈಟ್‌ಗಳಿಗಿಂತ ಹೆಚ್ಚು ಡೇಟಾವನ್ನು ಉತ್ಪಾದಿಸುತ್ತಿದೆ. ಹೆಚ್ಚಾಗಿ ಬಳಕೆಯಾಗದ ಈ ಪೊಲೀಸ್ ಡೇಟಾದಿಂದ ನಗರದಲ್ಲಿನ ಸಂಚಾರ ಸುರಕ್ಷತೆ ಮತ್ತು ಸವಾಲುಗಳನ್ನು ನಿವಾರಿಸಲು ಅನುಕೂಲಕರವಾಗುವಂತಹ ಒಳನೋಟಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು ಈ ಒಡಂಬಡಿಕೆಯ ಉದ್ದೇಶ'' ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಅಲ್ಲದೆ, ''ಸಂಚಾರ ಸುರಕ್ಷತೆಯನ್ನು ಸುಧಾರಿಸಲು ನಮ್ಮ ಸಿಬ್ಬಂದಿಗೆ ಸರಿಯಾದ ಜ್ಞಾನದ ಮೂಲವನ್ನು ಒದಗಿಸಲು ಅನುಕೂಲಕರವಾಗುವಂತಹ ತರಬೇತಿಯನ್ನ ನಾವು ಐಐಎಸ್‌ಸಿಯಿಂದ ಎದುರುನೋಡುತ್ತಿದ್ದೇವೆ'' ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.