ಬೆಂಗಳೂರು:ತಮ್ಮ ವಾಹನದ ಮೇಲೆ ಹಣ ಎಸೆದ ಮಹಿಳೆ ಕ್ಷಮೆ ಕೇಳುವ ಅಗತ್ಯ ಇರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಶುಕ್ರವಾರ ಕೆರೂರಿನಲ್ಲಿ ಹಣ ಎಸೆದಿದ್ದಾರೆಂದು ಹೇಳಲಾದ ಸೋದರಿಗೆ ತನ್ನ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳುವ ಅಗತ್ಯ ಇರಲಿಲ್ಲ. ತಮ್ಮ ಕುಟುಂಬದ ಮೇಲಿನ ಹಲ್ಲೆಯಿಂದ ನೊಂದ ಅವರ ಭಾವುಕ ಪ್ರತಿಕ್ರಿಯೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಎಲ್ಲರೂ ಒಂದಾಗಿ ಬಾಳಬೇಕೆಂದು ಮನವಿ ಮಾಡಿ ನನಗೆ ಶುಭ ಹಾರೈಸಿದ ಸೋದರಿಗೆ ಧನ್ಯವಾದಗಳು ಎಂದಿದ್ದಾರೆ.
ಬಾಗಲಕೋಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ 2 ಲಕ್ಷ ರೂಪಾಯಿಯನ್ನು ಮಹಿಳೆಯೊಬ್ಬರು ಎಸೆದ ಘಟನೆ ಶುಕ್ರವಾರ ನಡೆದಿತ್ತು. ಬಾದಾಮಿ ಕ್ಷೇತ್ರದ ಕೆರೂರ ಗುಂಪು ಘರ್ಷಣೆ ಗಾಯಾಳುಗಳ ಭೇಟಿಗೆ ಬಾಗಲಕೋಟೆಗೆ ಆಗಮಿಸಿದ ವೇಳೆ ಈ ಘಟನೆ ನಡೆದಿತ್ತು. ಗಾಯಾಳುಗಳ ಸಂಬಂಧಿಗಳು ಆಕ್ರೋಶ ಹೊರ ಹಾಕಿದ್ದರು. ವಾಹನದಲ್ಲಿ ಸಿದ್ದರಾಮಯ್ಯ ಅವರು ಮರಳುತ್ತಲೇ ಹಣ ಹಿಡಿದು ವಾಹನದ ಹಿಂದೆ ಹೋದ ಮಹಿಳೆ ಹಣದ ಕಟ್ಟನ್ನು ಪೊಲೀಸ್ ಬೆಂಗಾವಲು ವಾಹನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.