ಬೆಂಗಳೂರು: ಐಎಂಎ ವಂಚನೆ ಪ್ರಕರಣ ತನಿಖೆ ನಡೆಸುತ್ತಿರುವ ಎಸ್ಐಟಿ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎ ಕಚೇರಿಗಳ ಮೇಲೆ ಶೋಧ ಕಾರ್ಯ ನಡೆಸಿದೆ. ಈ ಸಂದರ್ಭ ಪರವಾನಗಿ ಪಡೆದುಕೊಂಡಿದ್ದ ಒಂದು ಪಿಸ್ತೂಲ್, 50 ಸಜೀವ ಗುಂಡುಗಳು ಪತ್ತೆಯಾಗಿವೆ ಎಂದು ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ತಿಳಿಸಿದ್ದಾರೆ.
ಐಎಂಎ ಕಚೇರಿ ಮೇಲೆ ಎಸ್ಐಟಿ ತಂಡ ದಾಳಿ ಐಎಂಎ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ಹರ್ಷದ್ ಎಂಬಾತ ನೀಡಿದ ಮಾಹಿತಿ ಮೇರೆಗೆ ಇಂದು ಬೆಳಗಿನಿಂದಲೇ ಲೇಡಿ ಕರ್ಜನ್ ರಸ್ತೆಯಲ್ಲಿರುವ ಐಎಂಎಗೆ ಸೇರಿದ ಎರಡು ಗೋಲ್ಡ್ ಕಚೇರಿಗಳ ಬೀಗ ತೆಗೆದು ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ರವಿಕಾಂತೇಗೌಡ ಐಎಂಎ ಮುಖ್ಯ ಕಚೇರಿಯಲ್ಲಿ ಚಿನ್ನ, ಬೆಳ್ಳಿ, ವಜ್ರ ಸಿಕ್ಕಿದೆ. ದೊರೆತಿರುವ ಎಲ್ಲಾ ವಸ್ತುಗಳ ಮೌಲ್ಯಮಾಪನ ನಡೆಯುತ್ತಿದೆ. ಇಂತಿಷ್ಟೇ ಸಿಕ್ಕಿದೆ ಎನ್ನುವುದರ ಖಚಿತ ಆಗಬೇಕಿದೆ. ಆತ ಹೊಂದಿದ್ದ ಪರವಾನಗಿ ಪಡೆದುಕೊಂಡಿದ್ದ ಪಾಯಿಂಟ್ 32mm ಪಿಸ್ತೂಲ್ ವಶ ಹಾಗೂ 50 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದರು.
ಮನ್ಸೂರ್ಗೆ ತಿಲಕ್ ನಗರ ಪೊಲೀಸರು ಪಿಸ್ತೂಲ್ಗೆ ಅನುಮತಿ ನೀಡಿದ್ದರು. ಸದ್ಯ ಪಿಸ್ತೂಲ್ನ ಅನುಮತಿ ರದ್ದತಿಗೆ ತಿಲಕ್ ನಗರ ಪೊಲೀಸರಿಗೆ ಪತ್ರ ಬರೆದಿದ್ದೇವೆ. ಇನ್ನೂ ನಮ್ಮ ಶೋಧನಾ ಕಾರ್ಯ ಮುಂದುವರೆದಿದೆ ಎಂದರು.
ಮನ್ಸೂರ್ ವಿಡಿಯೋ ಹೇಳಿಕೆ ಪ್ರತಿಕ್ರಿಯಿಸಿದ ಅವರು ಮನ್ಸೂರ್ ಒಬ್ಬ ಆರೋಪಿ. ತನಗೆ ಅನುಕೂಲದ ರೀತಿ ವೀಡಿಯೋದಲ್ಲಿ ಹೇಳಿ ಕೊಟ್ಟಿದ್ದಾನೆ. ಎಲ್ಲಾ ವಸ್ತುಗಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ವೀಡಿಯೋ ಅಪ್ಲೋಡ್ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಗೆ ಪೂರಕವಾದ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ.