ಬೆಂಗಳೂರು:ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಆದರೆ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಲಿದೆ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಹೇಳಿದ್ದಾರೆ.
ಎಫ್ಕೆಸಿಸಿಐ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಸ್ತುತವಾಗಿ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಲಾಕ್ಡೌನ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಮತ್ತೊಮ್ಮೆ ಲಾಕ್ಡೌನ್ ಆದರೆ ಕೈಗಾರಿಕೆಗಳು, ರೈತರು ಸೇರಿದಂತೆ ಎಲ್ಲಾ ಉದ್ಯಮಗಳು ಕಷ್ಟ ಅನುಭವಿಸುತ್ತವೆ ಎಂದಿದ್ದಾರೆ.
ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಈಗಾಗಲೇ 3 ತಿಂಗಳ ಲಾಕ್ಡೌನ್ ಅವಧಿಯಲ್ಲಿ ಒಂದು ಕೋಟಿಗಿಂತ ಅಧಿಕ ಕಾರ್ಮಿಕರು ಸಂಬಳವಿಲ್ಲದೆ ಪರದಾಡಿದರು. ಜೊತೆಗೆ ಉದ್ದಿಮೆದಾರರು ಆದಯವಿಲ್ಲದೆ ಬ್ಯಾಂಕ್ ಬಡ್ಡಿ ಕಟ್ಟಲಾಗದೆ ತಲೆ ಕೆಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ 3 ಲಕ್ಷ ಕೋಟಿ ರೂ. ಸಹಾಯದಿಂದ ಸ್ವಲ್ಪ ಚೇತರಿಕೆ ಕಾಣಲು ದಾರಿ ಆಯಿತು. ಇದರ ನಡುವೆ ಸರ್ಕಾರ ಪಶ್ಚಿಮ ಬಂಗಾಳ ರೀತಿ ಲಾಕ್ಡೌನ್ ಮಾಡಿದರೆ ಶೋಚನೀಯ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಕೊರೊನಾ ತಡೆಗಟ್ಟಲು ಲಾಕ್ಡೌನ್ ಪರಿಹಾರವಲ್ಲ. ಮೊದಲು ಲಾಕ್ಡೌನ್ ಮಾಡಿದ ಉದ್ದೇಶ ವೈದ್ಯಕೀಯ ಸೇವೆಗಳನ್ನ ಸ್ಥಿರಗೊಳಿಸುವುದು. ಜೊತೆಗೆ ಈಗ ಜನರಲ್ಲಿ ಜಾಗೃತಿ ಮೂಡಿರುವ ಕಾರಣ ಲಾಕ್ಡೌನ್ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಲಾಕ್ಡೌನ್ ಮಾಡಿದರೆ ಆರ್ಥಿಕತೆ ನೆಲಕಚ್ಚುತ್ತದೆ ಎಂದಿದ್ದಾರೆ.