ಬೆಂಗಳೂರು: ನಗರದಲ್ಲಿ ಈಗಿರುವ ಕಸ ಗುಡಿಸುವ ಯಂತ್ರಗಳು (ಸ್ವೀಪಿಂಗ್ ಮಷಿನ್) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮತ್ತೆ 20ಕ್ಕೂ ಹೆಚ್ಚು ಸ್ವೀಪಿಂಗ್ ಮಷಿನ್ಗಳಿಗೆ ಟೆಂಡರ್ ಕರೆಯಲಾಗಿದೆ. ಇದನ್ನು ವಿರೋಧಿಸಿ ಪಾಲಿಕೆ ಸಭೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಪದ್ಮನಾಭ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆ ಮಾಡುವ ಅಧಿಕಾರಿಗಳಿಗೆ ಲಕ್ಷ ರೂ. ಬಹುಮಾನ ಕೊಡುತ್ತೇನೆ. ಒಂದು ಯಂತ್ರ 20 ಕಿ.ಮೀ ಕಸ ಗುಡಿಸಿದರೆ 1 ಲಕ್ಷ ಬಹುಮಾನ ಎಂದು ಅಧಿಕಾರಿಗಳಿಗೆ ಸವಾಲ್ ಹಾಕಿದರು.
ಟಿಪಿಎಸ್ ಸಂಸ್ಥೆ ಮೂಲಕ ಕೋಟ್ಯಂತರ ರೂ. ವೆಚ್ಚ ಮಾಡಿ, ಖರೀದಿಸಿದ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಇದರ ನಡುವೆಯೇ ಮತ್ತೆ 20ಕ್ಕೂ ಹೆಚ್ಚು ವಾಹನಗಳಿಗೆ ಟೆಂಡರ್ ಕರೆಯಲಾಗಿದೆ. ಈಗಾಗಲೇ 60ಕ್ಕೂ ಹೆಚ್ಚು ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಬಿಬಿಎಂಪಿ ಬಳಿ ಇದೆ. ಅಧಿಕಾರಿಗಳು ಪ್ರತಿ ತಿಂಗಳು ನಿರ್ವಹಣೆಗೆಂದೇ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಹೊಸ ಯಂತ್ರಗಳ ಖರೀದಿಯ ಟೆಂಡರ್ ರದ್ದು ಮಾಡುವಂತೆ ಆಗ್ರಹಿಸಿದರು.
ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಗೌತಮ್ ಕುಮಾರ್ ಮೇಯರ್ ಆಗಿ 8 ತಿಂಗಳು ಕಳೆದಿದೆ. 8 ತಿಂಗಳಲ್ಲಿ ಬಿಜೆಪಿ ಅವಧಿ ಅಟ್ಟರ್ ಫ್ಲಾಪ್. ನಿಮ್ಮ ಅವಧಿಯಲ್ಲಿ ಸಾಕಷ್ಟು ಗೋಲ್ಮಾಲ್ ಆಗಿದೆ. ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಟೀಕಿಸಿದರು. ಟೆಂಡರ್ ನೀಡಿಕೆ, ಅಭಿವೃದ್ಧಿ ವಿಚಾರದಲಿ ಗೋಲ್ಮಾಲ್ ಆಗಿದೆ. ಜೊತೆಗೆ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಖರೀದಿ ಪ್ರಕ್ರಿಯೆ ಕೈ ಬಿಡುವಂತೆ ಆಗ್ರಹಿಸಿದರು.
ಆದ್ರೆ ಆಯುಕ್ತರು ಈ ಬಗ್ಗೆ ಸ್ಪಷ್ಟನೆ ಕೊಡುವ ಸಮಯದಲ್ಲಿ ಸ್ವೀಪಿಂಗ್ ಯಂತ್ರಗಳ ಖರೀದಿ ಬಗ್ಗೆ ಉತ್ತರಿಸಲಿಲ್ಲ. ನಗರದ ವಾರ್ಡ್ ರಸ್ತೆಗಳು 93 ಸಾವಿರ ಕಿ.ಮೀ, ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳು 1400 ಕಿ.ಮೀ ಇದೆ. ಈ ರಸ್ತೆಗಳನ್ನು ಸ್ವಚ್ಛ ಇಟ್ಟುಕೊಳ್ಳೋದು ಮುಖ್ಯ ಎಂದಷ್ಟೇ ಹೇಳಿದರು.
ಪೈಥಾನ್ ಯಂತ್ರ ಖರೀದಿಯಲ್ಲಿ 5 ಕೋಟಿ ರೂ ಗೋಲ್ಮಾಲ್:
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಪೈಥಾನ್ ಯಂತ್ರ ಹಾಗೂ ಸ್ವೀಪಿಂಗ್ ಮಷಿನ್ ಎರಡಕ್ಕೂ ನನ್ನ ವಿರೋಧ ಇದೆ. ಪೈಥಾನ್ ಯಂತ್ರದ ಮೂಲಕ ರಸ್ತೆಗುಂಡಿ ಮುಚ್ಚಲು, ಎಆರ್ಟಿಎಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಟಿವಿಸಿಸಿ ಮೂಲಕ ತನಿಖೆ ನಡೆಸಿದಾಗ 5 ಕೋಟಿ 36 ಲಕ್ಷ ರೂ. ಹೆಚ್ಚುವರಿ ಬಿಲ್ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇದನ್ನು ರಿಕವರಿ ಮಾಡಲು ಆಯುಕ್ತರಿಗೆ ಇವತ್ತೇ ಪತ್ರ ಬರೆಯುತ್ತೇನೆ. ರಿಪೋರ್ಟ್ ಬರೆದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದರು. ಇನ್ನು ನಾನೇ ಸ್ವೀಪಿಂಗ್ ಮಷಿನ್ ಹಗರಣದ ಬಗ್ಗೆ ಮಾಧ್ಯಮದ ಗಮನಕ್ಕೆ ತಂದಿದ್ದೆ. ಆದ್ರೆ ಯಾವುದೇ ಬಿಲ್ ಪಾವತಿ ಆಗಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ ಎಂದರು.
ಕೊರೊನಾ ಹಿನ್ನೆಲೆ, ಸರ್ಕಾರ ಆಕ್ಸಿಜನ್ ಸರಬರಾಜು ಮಾಡ್ತಿಲ್ಲ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಒಂದು ಕಡೆ ಬೆಡ್ಗಳಿಲ್ಲ, ಮತ್ತೊಂದು ಕಡೆ ಅಕ್ಸಿಜನ್ ಪೂರೈಕೆಯಾಗ್ತಿಲ್ಲ ಎಂದರು. ವಾಜೀದ್ ಹೇಳಿಕೆಗೆ ಬಿಜೆಪಿ ಕಾರ್ಪೊರೇಟರ್ಸ್ ವಿರೋಧಿಸಿ, ಆಕ್ಸಿಜನ್ ಪೂರೈಸ್ತಿರೋದು ಖಾಸಗಿ ಕಂಪನಿಗಳು. ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ಕಾರ್ಪೊರೇಟರ್ ಡಾ. ರಾಜು ಪ್ರತ್ಯುತ್ತರ ನೀಡಿದರು.